×
Ad

ಮಹಾರಾಷ್ಟ್ರದಲ್ಲಿ 23 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದ ಉದ್ಧವ್ ಸೇನೆಯ ಪ್ರಸ್ತಾಪ ತಿರಸ್ಕರಿಸಿದ ಕಾಂಗ್ರೆಸ್

Update: 2023-12-28 20:00 IST

ಉದ್ಧವ್ ಠಾಕ್ರೆ | Photo : PTI 

ಮುಂಬೈ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತನಗೆ 23 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಪ್ರಸ್ತಾಪವನ್ನು ಕಾಂಗ್ರೆಸ್ ಪಕ್ಷವು ನಿರಾಕರಿಸಿದೆ. ಈ ಬೆಳವಣಿಗೆಯು ಮಹಾರಾಷ್ಟ್ರ ವಿಕಾಸ್ ಅಘಾಡಿ ಪಾಲುದಾರ ಪಕ್ಷಗಳಾದ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಕಾಂಗ್ರೆಸ್ ಹಾಗೂ ಎನ್‍ಸಿಪಿಗಳು ಸೀಟು ಹಂಚಿಕೆಯ ಕುರಿತು ಮಾತುಕತೆಗೆ ಭೇಟಿ ಮಾಡಿದಾಗ ಆಗಿದೆ ಎಂದು indiatoday.in ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, ಎರಡು ಬಣಗಳಾಗಿ ಹೋಳಾಗಿರುವ ಶಿವಸೇನೆಯು, ಬಹುತೇಕ ಸದಸ್ಯರು ಏಕನಾಥ ಶಿಂದೆಯೊಂದಿಗಿದ್ದರೂ ಮಹಾರಾಷ್ಟ್ರದ 48 ಸೀಟುಗಳ ಪೈಕಿ 23 ಸೀಟುಗಳು ತನಗೆ ಬೇಕು ಎಂಬ ಪ್ರಸ್ತಾಪವಿರಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನೆಯು ಎರಡು ಹೋಳಾಗಿದ್ದು, ಅದರ ಬಳಿ ಸೂಕ್ತ ಅಭ್ಯರ್ಥಿಗಳಿಲ್ಲದೆ ಇರುವುದರಿಂದ ಗಮನಾರ್ಹ ಸವಾಲು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಶಿವಸೇನೆ ಹಾಗೂ ಶರದ್ ಪವಾರ್ ನೇತೃತ್ವದ ಎನ್ಸಿಪಿಯು ಹೋಳಾಗಿರುವುದರಿಂದ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಸ್ಥಿರವಾದ ಮತ ಗಳಿಕೆ ಪ್ರಮಾಣವನ್ನು ಹೊಂದಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ.

“ಪಕ್ಷಗಳ ನಡುವೆ ಹೊಂದಾಣಿಕೆಯ ಅಗತ್ಯವಿದೆ. ಎಲ್ಲ ಪಕ್ಷಗಳೂ ದೊಡ್ಡ ಪ್ರಮಾಣದ ಸೀಟುಗಳನ್ನು ಬಯಸುತ್ತಿದ್ದು, ಈಗಿನ ಸಂದರ್ಭದಲ್ಲಿ ಶಿವಸೇನೆ ಕೇಳುತ್ತಿರುವ 23 ಸೀಟುಗಳು ತೀರಾ ಅಧಿಕವಾಗಿವೆ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಅಶೋಕ್ ಚವ್ಹಾಣ್ ಹೇಳಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟವಾದ INDIAದ ಇತ್ತೀಚಿನ ಸಭೆ ನಡೆಯುವುದಕ್ಕೂ ಒಂದು ವಾರ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯಲ್ಲದೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಶಿವಸೇನೆ (ಉದ್ಧವ್ ಬಣ) ಸಂಸದ ಸಂಜಯ್ ರಾವತ್, ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಭೇಟಿ ಮಾಡಿ ಸೀಟು ಹಂಚಿಕೆಯ ಕುರಿತು ಚರ್ಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News