ಜಮ್ಮುಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವುದನ್ನು ಶ್ಲಾಘಿಸಿದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್
ಸಲ್ಮಾನ್ ಖುರ್ಷಿದ್ (File Photo: PTI)
ಹೊಸದಿಲ್ಲಿ : ಜಮ್ಮುಕಾಶ್ಮೀರದಲ್ಲಿ ʼವಿಧಿ 370ʼ ರದ್ದುಗೊಳಿಸಿರುವುದನ್ನು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಶುಕ್ರವಾರ ಶ್ಲಾಘಿಸಿದ್ದಾರೆ. ಈ ಕ್ರಮವು ಈ ಪ್ರದೇಶದಲ್ಲಿ ಸಮೃದ್ಧಿ ಮತ್ತು ಪ್ರಜಾಪ್ರಭುತ್ವದ ಪ್ರಗತಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಭಾರತದ ಸಂಸದೀಯ ನಿಯೋಗದ ಭಾಗವಾಗಿ ಇಂಡೋನೇಷ್ಯಾ ತೆರಳಿದ್ದ ಸಲ್ಮಾನ್ ಖುರ್ಷಿದ್ ಚಿಂತಕರ ಚಾವಡಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ʼ370ನೇ ವಿಧಿಯ ಅಡಿಯಲ್ಲಿ ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸಾಂವಿಧಾನಿಕ ಸ್ಥಾನಮಾನವು ಪ್ರತ್ಯೇಕತೆಯ ಭಾವನೆಯನ್ನು ಬೆಳೆಸಿದೆ. ಇದು ಒಂದು ಪ್ರಮುಖ ಸಮಸ್ಯೆಯಾಗಿತ್ತು. 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವುದರಿಂದ ಜಮ್ಮುಕಾಶ್ಮೀರ ಭಾರತದ ಉಳಿದ ಭಾಗಗಳಿಗಿಂತ ಪ್ರತ್ಯೇಕವಾದ ಪ್ರದೇಶ ಎಂಬ ಗ್ರಹಿಕೆ ಕೊನೆಗೊಂಡಿತುʼ ಎಂದು ಹೇಳಿದರು.
ಸಂವಿಧಾನದ 370ನೇ ವಿಧಿಯು ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. ಅದನ್ನು ಆಗಸ್ಟ್ 2019ರಲ್ಲಿ ಕೇಂದ್ರ ಸರಕಾರ ರದ್ದುಗೊಳಿಸಿತ್ತು.
ಜನತಾದಳ(ಯುನೈಟೆಡ್) ಸಂಸದ ಸಂಜಯ್ ಕುಮಾರ್ ಝಾ ನೇತೃತ್ವದ ಸರ್ವಪಕ್ಷದ ನಿಯೋಗದಲ್ಲಿ ಸಲ್ಮಾನ್ ಖುರ್ಷಿದ್ ಇಂಡೋನೇಷ್ಯಾಕ್ಕೆ ತೆರಳಿದ್ದರು.