×
Ad

Maharashtra | ಮಸೀದಿಯಲ್ಲಿ ಚಾಕು ಇರಿತ: ಕಾಂಗ್ರೆಸ್ ಹಿರಿಯ ನಾಯಕ ಹಿದಾಯತುಲ್ಲಾ ಪಟೇಲ್ ಮೃತ್ಯು

Update: 2026-01-08 07:52 IST

PC | siasat

ಅಕೋಲಾ (ಮಹಾರಾಷ್ಟ್ರ): ಅಕೋಲಾ ಜಿಲ್ಲೆಯ ಅಕೋಟ್ ತಾಲ್ಲೂಕಿನ ಮೊಹಲಾ ಗ್ರಾಮದಲ್ಲಿರುವ ಮಸೀದಿಯಲ್ಲಿ ಚಾಕುವಿನಿಂದ ಇರಿತಕ್ಕೊಳಗಾದ ಕಾಂಗ್ರೆಸ್‌ ನ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಉಪಾಧ್ಯಕ್ಷ ಹಿದಾಯತುಲ್ಲಾ ಪಟೇಲ್ (66) ಅವರು ಚಿಕಿತ್ಸೆ ವೇಳೆ ಬುಧವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 6ರಂದು ಮಧ್ಯಾಹ್ನ 1.30ರ ಸುಮಾರಿಗೆ ಪಟೇಲ್ ಅವರು ಮಸೀದಿಯಲ್ಲಿ ನಮಾಝ್ ಮುಗಿಸಿ ಹೊರಬರುತ್ತಿದ್ದ ವೇಳೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಆರೋಪಿಯು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ದಾಳಿಯಲ್ಲಿ ಪಟೇಲ್ ಅವರ ಕುತ್ತಿಗೆ ಮತ್ತು ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವ ಉಂಟಾಗಿತ್ತು ಎಂದು ತಿಳಿದು ಬಂದಿದೆ.

ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣ ಅಕೋಟ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಟೇಲ್ ಅವರು ರಕ್ತದಲ್ಲಿ ತೊಯ್ದ ಬಟ್ಟೆಗಳೊಂದಿಗೆ ಮಸೀದಿಯಿಂದ ಹೊರಬರುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಧಿವಿಜ್ಞಾನ ತಜ್ಞರ ನೆರವಿನಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಆರೋಪಿಯನ್ನು ಬಂಧಿಸಲು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ತನಿಖೆಯ ವೇಳೆ 22 ವರ್ಷದ ಉಬೇದ್ ಖಾನ್ ಕಲು ಖಾನ್ ಅಲಿಯಾಸ್ ರಾಜಿಕ್ ಖಾನ್ ಪಟೇಲ್ ಎಂಬ ಆರೋಪಿಯನ್ನು ಅಕೋಟ್ ತಾಲ್ಲೂಕಿನ ಪಣಜ್ ಗ್ರಾಮದಿಂದ ರಾತ್ರಿ 8 ಗಂಟೆ ಸುಮಾರಿಗೆ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ. ಚಂದ್ರಕಾಂತ್ ರೆಡ್ಡಿ ತಿಳಿಸಿದ್ದಾರೆ.

ಅಕೋಟ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News