×
Ad

ʼಕೇಸರಿ’ಯಲ್ಲಿ ಪ್ರಕಟಿತ ಲೇಖನ ಆರೆಸ್ಸೆಸ್‌ನ ಕ್ರೈಸ್ತ ವಿರೋಧಿ ನಿಲುವನ್ನು ಪ್ರದರ್ಶಿಸಿದೆ: ಕಾಂಗ್ರೆಸ್

Update: 2025-09-14 15:47 IST

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (Photo: PTI)

ತಿರುವನಂತಪುರ: ‘ಕೇಸರಿ’ ಮಲಯಾಳಂ ಆವೃತ್ತಿಯಲ್ಲಿ ಪ್ರಕಟವಾಗಿರುವ ಲೇಖನವು ಆರೆಸ್ಸೆಸ್‌ನ ಕ್ರೈಸ್ತ ವಿರೋಧಿ ನಿಲುವನ್ನು ಪ್ರದರ್ಶಿಸಿದೆ ಎಂದು ಕಾಂಗ್ರೆಸ್ ರವಿವಾರ ಆರೋಪಿಸಿದೆ.

ಲೇಖನವು ಕೈಸ್ತ ಸಮುದಾಯವನ್ನು ಟೀಕಿಸಿದೆ.ಸಮಾಜದಲ್ಲಿ ಮತ್ತೊಮ್ಮೆ ದ್ವೇಷವನ್ನು ಹರಡುವುದು ಮತ್ತು ಧಾರ್ಮಿಕ ಮತಾಂತರದ ಹೆಸರಿನಲ್ಲಿ ಕ್ರೈಸ್ತರನ್ನು ದೇಶದ ಶತ್ರುಗಳನ್ನಾಗಿ ಬಿಂಬಿಸುವುದು ಲೇಖನದ ಹಿಂದಿನ ಉದ್ದೇಶವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆರೋಪಿಸಿದ್ದಾರೆ.

ಆರೆಸ್ಸೆಸ್ ಲೇಖನದಲ್ಲಿ ಪ್ರದರ್ಶಿಸಿರುವ ಕ್ರೈಸ್ತ ವಿರೋಧಿ ನಿಲುವನ್ನು ತಿರಸ್ಕರಿಸಲು ಬಿಜೆಪಿ ಸಿದ್ಧವಿದೆಯೇ ಎಂದು ವೇಣುಗೋಪಾಲ್ ಕಟುವಾದ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಬಲಪಂಥೀಯ ಗುಂಪಿನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವೇಣುಗೋಪಾಲ್,‌ ಕ್ರೈಸ್ತರ ಬಗ್ಗೆ ಸಂಘ ಪರಿವಾರದ ಪ್ರೀತಿಯು ಎಷ್ಟೇ ಬಣ್ಣ ಬಳಿದರೂ ಊಳಿಡುವುದನ್ನು ನಿಲ್ಲಿಸದ ನೀತಿಕಥೆಯಲ್ಲಿನ ‘ನೀಲಿ ನರಿ’ಯಷ್ಟೇ ನಕಲಿಯಾಗಿದೆ. ಅಲ್ಪಸಂಖ್ಯಾತರ ವಿರುದ್ಧ ವಿಷ ಕಾರುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಆರೆಸ್ಸೆಸ್ ತನ್ನ ಕೊನೆಯ ಉಸಿರಿನವರೆಗೂ ಅದನ್ನು ಮುಂದುವರಿಸುವುದಾಗಿ ಈ ಲೇಖನದ ಮೂಲಕ ಘೋಷಿಸಿದೆ. ಲೇಖನವು ಆರೆಸ್ಸೆಸ್‌ನ ಕ್ರೈಸ್ತ ವಿರೋಧಿ ನಿಲುವನ್ನು ಇನ್ನಷ್ಟು ಬಹಿರಂಗಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚಿಗೆ ಛತ್ತೀಸ್‌ಗಡದಲ್ಲಿ ಕೇರಳದ ಇಬ್ಬರು ಕೆಥೋಲಿಕ್ ನನ್‌ಗಳ ಬಂಧನ ಮತ್ತು ಬಿಡುಗಡೆಯನ್ನು ಹೇಳಿಕೆಯಲ್ಲಿ ಉಲ್ಲೇಖಿಸಿರುವ ವೇಣುಗೋಪಾಲ್, ಈ ಘಟನೆಯ ಬಳಿಕ ರಾಜ್ಯ ಬಿಜೆಪಿ ಮುಖ್ಯಸ್ಥರು ಸೇರಿದಂತೆ ಈ ನನ್‌ಗಳೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದವರ ನಿಜವಾದ ಬಣ್ಣವನ್ನು ಈ ಲೇಖನವು ಬಯಲಿಗೆಳೆದಿದೆ ಎಂದಿದ್ದಾರೆ.

ಸಂಘ ಪರಿವಾರ ಸಂಘಟನೆಗಳ ಕುರುಡು ‘ಅಲ್ಪಸಂಖ್ಯಾತ ವಿರೋಧಿ’ ಭಾವನೆಗಳ ಕುರಿತು ಜಾಗ್ರತರಾಗಿರುವಂತೆ ಅವರು ಕೇರಳದ ಜನತೆಯನ್ನು ಆಗ್ರಹಿಸಿದ್ದಾರೆ.

ಬಲಪಂಥೀಯ ಸಂಘಟನೆ ಹಿಂದು ಐಕ್ಯವೇದಿಯ ರಾಜ್ಯ ಉಪಾಧ್ಯಕ್ಷ ಇ.ಎಸ್.‌ ಬಿಜು ಬರೆದ ಲೇಖನ ಎರಡು ದಿನಗಳ ಹಿಂದೆ ‘ಕೇಸರಿ’ಯಲ್ಲಿ ಪ್ರಕಟಗೊಂಡಿತ್ತು.

‘ಆಗೋಳ ಮತಪರಿವರ್ತನಂಥಿಟೆ ನಲ್ವಾಳಿಕಲ್(ಜಾಗತಿಕ ಧಾರ್ಮಿಕ ಮತಾಂತರದ ಕಾಲಾನುಕ್ರಮಣಿಕೆ)’ ಶೀರ್ಷಿಕೆಯ ಲೇಖನದಲ್ಲಿ ಲೇಖಕರು ವರ್ಷಗಳ ಕಾಲ ದೇಶದಲ್ಲಿ ನಡೆದಿದೆಯೆನ್ನಲಾದ ಧಾರ್ಮಿಕ ಮತಾಂತರಗಳಿಗಾಗಿ ಕ್ರೈಸ್ತ ಸಮುದಾಯವನ್ನು ದೂರಿದ್ದಾರೆ.

ಧಾರ್ಮಿಕ ಮತಾಂತರ ಮತ್ತು ಮಾನವ ಕಳ್ಳಸಾಗಣೆ ಆರೋಪದಲ್ಲಿ ಛತ್ತೀಸ್‌ಗಡದಲ್ಲಿ ಕೇರಳದ ಇಬ್ಬರು ನನ್‌ಗಳ ಬಂಧನವನ್ನು ಬೆಟ್ಟು ಮಾಡಿರುವ ಲೇಖನವು, ಘಟನೆಗೆ ಸಂಬಂಧಿಸಿದಂತೆ ರಾಜ್ಯದ ರಾಜಕೀಯ ಮತ್ತು ಧಾರ್ಮಿಕ ನಾಯಕತ್ವವು ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ಧಾರ್ಮಿಕ ಮತ್ತು ಭಾವನಾತ್ಮಕ ಸಂಘರ್ಷವನ್ನು ಬೆಳೆಸಲು ಪ್ರಯತ್ನಿಸಿದೆ ಎಂದು ಆರೋಪಿಸಿದೆ.

ಇದು ಭಾರತೀಯ ಸಂವಿಧಾನದ ತಿರುಳನ್ನು ಪ್ರಶ್ನಿಸುತ್ತದೆ. ಅಲ್ಪಸಂಖ್ಯಾತ ಧರ್ಮಗಳಿಗೆ ಒಂದು ನ್ಯಾಯ,ಬಹುಸಂಖ್ಯಾತರಿಗೆ ಇನ್ನೊಂದು ನ್ಯಾಯ;ಇದು ರಾಜ್ಯದಲ್ಲಿಯ ಪ್ರಸ್ತುತ ಪರಿಸ್ಥಿತಿಯಾಗಿದೆ ಎಂದು ಹೇಳಿರುವ ಲೇಖನವು,ದೇಶದ ನಿಯಮಗಳು ಎಲ್ಲರಿಗೂ ಸಮಾನವಾಗಿವೆ ಎಂದು ಪ್ರತಿಪಾದಿಸಿದೆ.

ಮತಾಂತರವು ಧಾರ್ಮಿಕ ಶಕ್ತಿಗಳ ಹಕ್ಕು ಆಗಿದ್ದರೆ ಅದನ್ನು ಪ್ರತಿರೋಧಿಸುವುದು ಹಿಂದುಗಳ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಒತ್ತಿ ಹೇಳಿರುವ ಲೇಖನವು,ದೇಶದಲ್ಲಿಯ ಪ್ರಸ್ತುತ ‘ವಿಚಿತ್ರ ಪರಿಸ್ಥಿತಿ’ಯನ್ನು ಬದಲಿಸಬೇಕು ಮತ್ತು ಇದಕ್ಕಾಗಿ ಸಂವಿಧಾನ ತಿದ್ದುಪಡಿ ಅಗತ್ಯವಾಗಿದೆ. ದೇಶದ ಎಲ್ಲ ಜನರಿಗೆ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕಾನೂನಿನ ಮೂಲಕ ಧಾರ್ಮಿಕ ಮತಾಂತರವನ್ನು ನಿಷೇಧಿಸಬೇಕು ಎನ್ನುವುದು ಇಂದಿನ ಬೇಡಿಕೆಯಾಗಿದೆ ಎಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News