×
Ad

ನಿಂಬೆ ಹಣ್ಣು , ಮೆಣಸು ಕಟ್ಟಲ್ಪಟ್ಟ ಆಟಿಕೆ ರಫೇಲ್ ವಿಮಾನ ಪ್ರದರ್ಶಿಸಿದ ಕಾಂಗ್ರೆಸ್ ನಾಯಕ!

Update: 2025-05-05 22:25 IST

Photo Credit: ANI

ಲಕ್ನೋ: ನಿಂಬೆ ಹಣ್ಣು ಮತ್ತು ಮೆಣಸು ಕಟ್ಟಲ್ಪಟ್ಟಿರುವ ಆಟಿಕೆ ರಫೇಲ್ ಯುದ್ಧ ವಿಮಾನವೊಂದನ್ನು ಪ್ರದರ್ಶಿಸುವ ಮೂಲಕ ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಜಯ್ ರೈ ಸೋಮವಾರ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ನರೇಂದ್ರ ಮೋದಿ ಸರಕಾರದ ಪ್ರತಿಕ್ರಿಯೆಯನ್ನು ಅಣಕಿಸಲು ಅವರು ಈ ರೀತಿ ಮಾಡಿದ್ದಾರೆ. ಎಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ.

ರೈ ಮೊದಲು, ರವಿವಾರ ಆಟಿಕೆ ವಿಮಾನವನ್ನು ಪ್ರದರ್ಶಿಸಿದ್ದರು. ಒಂದು ದಿನದ ಬಳಿಕ ತನ್ನ ಕ್ರಮವನ್ನು ಸಮರ್ಥಿಸಿರುವ ಅವರು, ಸರಕಾರದ ನಿಷ್ಕ್ರಿಯತೆಯ ಬಗ್ಗೆ ಸಾರ್ವಜನಿಕರ ಹತಾಶೆಯನ್ನು ಬಿಂಬಿಸುವುದಕ್ಕಾಗಿ ನಾನು ಹಾಗೆ ಮಾಡಿದೆ ಎಂದು ಹೇಳಿದ್ದಾರೆ. ‘‘ರಫೇಲ್ ಯಾವಾಗ ತನ್ನ ಕೆಲಸವನ್ನು ಆರಂಭಿಸುತ್ತದೆ ಎಂದಷ್ಟೇ ನಾನು ಕೇಳುತ್ತಿದ್ದೇನೆ. ದೇಶ ಇಂದು ಪ್ರತಿಕ್ರಿಯೆಯನ್ನು ಬಯಸುತ್ತಿದೆ, ಆಚರಣೆಗಳನ್ನಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ 2019ರಲ್ಲಿ ಫ್ರಾನ್ಸ್‌ನಲ್ಲಿ ‘‘ಶಸ್ತ್ರಪೂಜೆ’’ ಮಾಡಿರುವುದನ್ನು ಅಜಯ್ ರೈ ಈ ಸಾಂಕೇತಿಕ ಕ್ರಮದ ಮೂಲಕ ಉಲ್ಲೇಖಿಸಿದ್ದಾರೆ. ಅಂದು ರಫೇಲ್ ವಿಮಾನಗಳು ಭಾರತಕ್ಕೆ ಹಾರುವ ಮುನ್ನ ರಾಜ್‌ನಾಥ್ ಸಿಂಗ್ ಒಂದು ರಫೇಲ್ ವಿಮಾನದ ಚಕ್ರಗಳ ಅಡಿಯಲ್ಲಿ ನಿಂಬೆ ಹಣ್ಣುಗಳನ್ನು ಇಟ್ಟು ತೆಂಗಿನಕಾಯಿಯೊಂದನ್ನು ಒಡೆದಿದ್ದರು.

ಕೇಂದ್ರ ಸರಕಾರದ ‘‘ದೊಡ್ಡ ಮಾತು ಮಾತ್ರ, ಯಾವುದೇ ಕ್ರಮವಿಲ್ಲ’’ ಧೋರಣೆಯನ್ನು ಟೀಕಿಸಿದ ಅವರು, ‘‘ಪಹಲ್ಗಾಮ್‌ನಲ್ಲಿ ನಮ್ಮ ಯುವಕರನ್ನು ಕೊಲ್ಲಲಾಗಿದೆ. ಆದರೆ, ನಿಂಬೆಹಣ್ಣು ಮತ್ತು ಮೆಣಸು ಕಟ್ಟಲ್ಪಟ್ಟಿರುವ ರಫೇಲ್ ವಿಮಾನಗಳು ಇನ್ನೂ ಗೋದಾಮುಗಳಲ್ಲಿವೆ. ಸಂತ್ರಸ್ತರ ಕುಟುಂಬಗಳು ನ್ಯಾಯಕ್ಕಾಗಿ ಕಾಯುತ್ತಿವೆ. ಸರಕಾರದ ಈ ಮೌನ ಸ್ವೀಕಾರಾರ್ಹವಲ್ಲ’’ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News