ತೆಲಂಗಾಣ: ಪೊಲೀಸ್ ಅಧಿಕಾರಿ ಆತ್ಮಹತ್ಯೆ
ಹೈದರಾಬಾದ್, ಅ. 12: ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಸ್ಪೆಷಲ್ ಬ್ರಾಂಚ್ ಯೂನಿಟ್ನಲ್ಲಿ ನಿಯೋಜಿತರಾಗಿದ್ದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಓರ್ವರು ತನ್ನ ಮನೆಯಲ್ಲಿ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸತ್ಯನಾರಾಯಣ (54) ಅವರು ಶನಿವಾರ ಅಪರಾಹ್ನ ಸುಮಾರು 1.30ರ ವೇಳೆಗೆ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಅಪಘಾತವಾದ ಬಳಿಕ ಅವರು ನಿರಂತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘‘ಆರೋಗ್ಯ ಸಮಸ್ಯೆಯಿಂದ ಅವರು ಒತ್ತಡಕ್ಕೆ ಒಳಗಾಗಿದ್ದರು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ. ಪ್ರಕರಣ ದಾಖಲಿಸಲಾಗಿದೆ ಹಾಗೂ ತನಿಖೆ ನಡೆಯುತ್ತಿದೆ’’ ಎಂದು ಸೂರ್ಯಪೇಟ್ ಗ್ರಾಮೀಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಸತ್ಯನಾರಾಯಣ ಅವರ ಸಾವಿನ ಖಚಿತ ಕಾರಣ ತಿಳಿಯಲು ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಹರ್ಯಾಣದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ವೈ. ಪೂರನ್ ಕುಮಾರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕೆಲವು ದಿನಗಳ ಬಳಿಕ ಈ ಘಟನೆ ನಡೆದಿದೆ.