ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಪ್ರಕರಣ : ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ
Photo Credit : ANI
ಹೊಸದಿಲ್ಲಿ, ಅ. 7: ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳು ಮೃತಪಟ್ಟಿವೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಈ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ, ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಮಂಗಳವಾರ ಆಗ್ರಹಿಸಿದೆ.
ಮಕ್ಕಳ ಪ್ರಾಣ ಹಾನಿಗೆ ಕಾರಣ ಎಂದು ಹೇಳಲಾದ ಕೆಮ್ಮಿನ ಸಿರಪ್ ಉತ್ಪಾದಿಸಿದ ಕಂಪೆನಿಗಳಿಗೆ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸರಕಾರಗಳು ಕ್ಲೀನ್ ಚಿಟ್ ನೀಡಿವೆ ಎಂದು ಕೂಡ ಕಾಂಗ್ರೆಸ್ ಆರೋಪಿಸಿದೆ.
ಈ ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಯಾಚಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ರಾಜಸ್ಥಾನ ವಿಧಾನ ಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಟಿಕಾ ರಾಮ್ ಜುಲ್ಲಿ ಹಾಗೂ ಮಧ್ಯಪ್ರದೇಶದ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಉಮಂಗ್ ಸಿಂಘರ್ ಇಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಛಿಂದ್ವಾರದಲ್ಲಿ 16 ಮಕ್ಕಳು ಮೃತಪಟ್ಟಿದ್ದಾರೆ. ಸ್ಥಳೀಯ ಕಾಂಗ್ರೆಸ್ ಶಾಸಕ ಸರಕಾರಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.
‘‘ಈ ವಿಷಯ ಉಲ್ಭಣಗೊಂಡಾಗ, ಹೆಣ್ಣು ಮಗುವಿನ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ರಾಜ್ಯದಲ್ಲಿ ಮಕ್ಕಳು ಮೃತಪಡುತ್ತಲೇ ಇದ್ದರು. ಮುಖ್ಯಮಂತ್ರಿ ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ತಿರುಗಾಡುತ್ತಲೇ ಇದ್ದರು’’ ಎಂದು ಸಿಂಘರ್ ಆರೋಪಿಸಿದ್ದಾರೆ.
‘‘ಮಧ್ಯಪ್ರದೇಶದ ಉಪ ಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಿರಪ್ ಕುಡಿದು ಯಾವುದೇ ಮಕ್ಕಳು ಮೃತಪಟ್ಟಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕೆಮ್ಮಿನ ಸಿರಪ್ ಉತ್ಪಾದಿಸುವ ಕಂಪೆನಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಇದೆಂತಹ ಸಂವೇದನಾ ರಹಿತ ಸರಕಾರ? ಔಷಧ ಉತ್ಪಾದನಾ ಕಂಪೆನಿಗಳೊಂದಿಗೆ ಉಪ ಮುಖ್ಯಮಂತ್ರಿಗಿರುವ ನಂಟು ಏನು?’’ ಎಂದು ಅವರು ಪ್ರಶ್ನಿಸಿದ್ದಾರೆ.