ಎಪ್ರಿಲ್ ನಲ್ಲಿ ಶೇ.5.1ರಷ್ಟಿದ್ದ ದೇಶದ ನಿರುದ್ಯೋಗ ಮೇ ತಿಂಗಳಿನಲ್ಲಿ ಶೇ.5.6ಕ್ಕೇರಿಕೆ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಸೋಮವಾರ ಬಿಡುಗಡೆಗೊಳಿಸಿರುವ ಇತ್ತೀಚಿನ ನಿಯತಕಾಲಿಕ ಕಾರ್ಮಿಕ ಪಡೆ ಸಮೀಕ್ಷೆ(ಪಿಎಲ್ಎಫ್ಎಸ್)ಯ ಪ್ರಕಾರ ಎಪ್ರಿಲ್ 2025ರಲ್ಲಿ ಶೇ.5.1ರಷ್ಟಿದ್ದ ಭಾರತದ ನಿರುದ್ಯೋಗ ದರವು ಮೇ ತಿಂಗಳಿನಲ್ಲಿ ಶೇ.5.6ಕ್ಕೆ ಏರಿಕೆಯಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ನಿರುದ್ಯೋಗವು ಹೆಚ್ಚಾಗಿದ್ದು,ಯುವಜನರಲ್ಲಿ ತೀವ್ರ ಉಲ್ಬಣಗೊಂಡಿದೆ. ಗ್ರಾಮೀಣ ಭಾರತದಲ್ಲಿ 15ರಿಂದ 29 ವರ್ಷ ವಯೋಮಾನದ ಯುವಜನರಲ್ಲಿ ನಿರುದ್ಯೋಗ ದರವು ಮೇ ತಿಂಗಳಿನಲ್ಲಿ ಶೇ.13.7ಕ್ಕೆ ಏರಿಕೆಯಾಗಿದ್ದು,ಇದು ಎಪ್ರಿಲ್ ನಲ್ಲಿ ಶೇ.12.3ರಷ್ಟಿತ್ತು. ನಗರ ಪ್ರದೇಶಗಳಲ್ಲಿ ಇದು ಎಪ್ರಿಲ್ ನಲ್ಲಿದ್ದ ಶೇ.17.2ರಿಂದ ಮೇ ತಿಂಗಳಿನಲ್ಲಿ ಶೇ.17.9ಕ್ಕೇರಿದೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ನಿರುದ್ಯೋಗ ದರವು ಶೇ.5.8ರಷ್ಟು ಹೆಚ್ಚಿದೆ.
ಕಾರ್ಮಿಕ ಪಡೆ ಭಾಗವಹಿಸುವಿಕೆ ದರ(ಎಲ್ಎಫ್ಪಿಆರ್),ಅಂದರೆ ಕಾರ್ಯಪಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜನರ ಅಂದಾಜು ಸಂಖ್ಯೆ,ಪ್ರಸ್ತುತ ಸಾಪ್ತಾಹಿಕ ಸ್ಥಿತಿಗತಿ(ಸಿಡಬ್ಲ್ಯುಎಸ್)ಯಲ್ಲಿ ಎಪ್ರಿಲ್ ನಲ್ಲಿದ್ದ ಶೇ.55.6ರಿಂದ ಮೇ ತಿಂಗಳಿನಲ್ಲಿ ಶೇ.54.8ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಎಲ್ಎಫ್ಪಿಆರ್ ಶೇ.56.9ರಷ್ಟು ಹೆಚ್ಚಾಗಿದ್ದು,ನಗರ ಪ್ರದೇಶದಲ್ಲಿ ಶೇ.50.4ರಷ್ಟಿತ್ತು.
ಸಿಡಬ್ಲ್ಯುಎಸ್ನಲ್ಲಿ ಎಲ್ಎಫ್ಪಿಆರ್ 15 ವರ್ಷ ಮತ್ತು ಹೆಚ್ಚಿನ ಪ್ರಾಯದ ಯುವಜನರಿಗಾಗಿ ಮೇ 2025ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅನುಕ್ರಮವಾಗಿ ಶೇ.78.3 ಮತ್ತು ಶೇ.75.1 ರಷ್ಟಿತ್ತು. ಇದು ಎಪ್ರಿಲ್ ನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಎಲ್ಎಫ್ಪಿಆರ್ ಅಂದಾಜುಗಳಾದ ಅನುಕ್ರಮವಾಗಿ ಶೇ.79.0 ಮತ್ತು ಶೇ.75.3ಕ್ಕಿಂತ ಕೊಂಚ ಕಡಿಮೆಯಾಗಿದೆ.
ಮೇ ತಿಂಗಳಿನಲ್ಲಿ ಗ್ರಾಮೀಣ ಪ್ರದೇಶಗಳ 15 ವರ್ಷ ಮತ್ತು ಹೆಚ್ಚಿನ ಪ್ರಾಯದ ಮಹಿಳೆಯರಲ್ಲಿ ಎಲ್ಎಫ್ಪಿಆರ್ ಶೇ.36.9ರಷ್ಟಿತ್ತು.
ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡನ್ನೂ ಒಳಗೊಂಡಿರುವ ಭಾರತದ ಕಾರ್ಮಿಕ ಪಡೆ ದತ್ತಾಂಶಗಳ ದ್ವಿತೀಯ ಮಾಸಿಕ ಸಮೀಕ್ಷೆಯಾಗಿದೆ. ಈ ಮೊದಲು ಸರಕಾರವು ನಗರ ಪ್ರದೇಶಗಳಿಗೆ ತ್ರೈಮಾಸಿಕ ಆಧಾರದಲ್ಲಿ ಮತ್ತು ವಾರ್ಷಿಕವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡಕ್ಕೂ ಉದ್ಯೋಗ ದತ್ತಾಂಶಗಳನ್ನು ಪ್ರಕಟಿಸುತ್ತಿತ್ತು.
ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇ.7.4ರಷ್ಟು ಹಿಗ್ಗಿರುವ ಏಶ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯು ಎಪ್ರಿಲ್ ನಿಂದ ಆರಂಭಗೊಂಡಿರುವ ಪ್ರಸಕ್ತ ವಿತ್ತ ವರ್ಷದಲ್ಲಿ ಹಿಂದಿನ ವರ್ಷದ ವೇಗಕ್ಕೆ ಅನುಗುಣವಾಗಿ ಶೇ.6.5ರಷ್ಟು ಬೆಳೆಯುವ ನಿರೀಕ್ಷೆಯಿದೆ.