ಅದಾನಿ ಎಂಟರ್‌ಪ್ರೈಸಸ್ ವಿರುದ್ಧ ಅವಹೇಳನಕಾರಿ ವಿಷಯ ಪ್ರಕಟಣೆ: ಪತ್ರಕರ್ತರಿಗೆ,ವೆಬ್‌ಸೈಟ್‌ಗಳಿಗೆ ಕೋರ್ಟ್ ನಿರ್ಬಂಧ
ಪರಿಶೀಲಸಲ್ಪಡದ ವಿಷಯವನ್ನು ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ತೆಗೆಯುವಂತೆ ಆದೇಶ
ಹೊಸದಿಲ್ಲಿ: ಅದಾನಿ ಎಂಟರ್‌ಪ್ರೈಸಸ್ ಲಿ.(ಎಇಎಲ್)ಗೆ ಮಹತ್ವದ ಪರಿಹಾರ ಕ್ರಮವಾಗಿ ದಿಲ್ಲಿಯ ನ್ಯಾಯಾಲಯವು ಪತ್ರಕರ್ತರು, ವೆಬ್‌ಸೈಟ್‌ಗಳು ಮತ್ತು ವಿದೇಶಿ ಮೂಲದ ಮಾಧ್ಯಮ ಸಂಸ್ಥೆಗಳಿಗೆ ಕಂಪನಿಯ ವಿರುದ್ಧ ಪರಿಶೀಲಿಸಲ್ಪಡದ ಮತ್ತು ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ನಿರ್ಬಂಧಿಸಿ ಶನಿವಾರ ಮಧ್ಯಂತರ ಆದೇಶವನ್ನು ಹೊರಡಿಸಿದೆ.
ಎಇಎಲ್ ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಅನುಜಕುಮಾರ ಸಿಂಗ್ ಅವರು ವೆಬ್‌ಸೈಟ್‌ಗಳಲ್ಲಿಯ ಲೇಖನಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈಗಾಗಲೇ ಪ್ರಕಟಗೊಂಡಿರುವ ಕಂಪನಿಯ ಕುರಿತ ವಿವಾದಿತ ವಿಷಯಗಳನ್ನು ನಿಗದಿತ ಅವಧಿಯೊಳಗೆ ತೆಗೆದುಹಾಕುವಂತೆಯೂ ಪ್ರತಿವಾದಿಗಳಿಗೆ ನಿರ್ದೇಶನ ನೀಡಿದರು.
Paranjoy.in, adaniwatch.org ಮತ್ತು adanifiles.com.auಗಳಲ್ಲಿ ಸಂಘಟಿತ ಮಾನಹಾನಿಕರ ಪ್ರಕಟಣೆಗಳು,ಸಂಬಂಧಿತ ವೀಡಿಯೊಗಳು ಮತ್ತು ಪೋಸ್ಟ್‌ಗಳು ತನ್ನ ಖ್ಯಾತಿಗೆ ಕಳಂಕವನ್ನುಂಟು ಮಾಡುವ ಮತ್ತು ತನ್ನ ಜಾಗತಿಕ ವ್ಯವಹಾರ ಕಾರ್ಯಾಚರಣೆಗಳಿಗೆ ಅಡ್ಡಿಯನ್ನುಂಟು ಮಾಡುವ ಉದ್ದೇಶವನ್ನು ಹೊಂದಿವೆ ಎಂದು ಎಇಎಲ್ ಆರೋಪಿಸಿದೆ.
ಪರಂಜಯ ಗುಹಾ ಠಾಕುರ್ತಾ, ರವಿ ನಾಯರ್, ಅಬಿರ್ ದಾಸಗುಪ್ತಾ, ಆಯಸ್ಕಾಂತ ದಾಸ್, ಆಯುಷ್ ಜೋಶಿ, ಬಾಬ್ ಬ್ರೌನ್ ಫೌಂಡೇಷನ್, ಡ್ರೀಮ್‌ಸ್ಕೇಪ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್ ಪ್ರೈ.ಲಿ.,ಗೆಟಪ್ ಲಿ.ಡೊಮೇನ್ ಡೈರೆಕ್ಟರ್ಸ್ ಪ್ರೈ.ಲಿ. ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದಾರೆ.
ಆಧಾರರಹಿತ ಆರೋಪಗಳನ್ನು ಅನಿಯಂತ್ರಿತವಾಗಿ ಹರಡುತ್ತಿರುವುದು ಕಂಪನಿಯ ವರ್ಚಸ್ಸಿಗೆ ಕಳಂಕವನ್ನುಂಟು ಮಾಡಿದ್ದು ಮಾತ್ರವಲ್ಲ, ಹೂಡಿಕೆದಾರರಿಗೂ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ವಾದಿಸಿದ ಎಇಎಲ್ ಪರ ವಕೀಲ ವಿಜಯ ಅಗರವಾಲ್ ಅವರು, ಕಂಪನಿಯು ತಪ್ಪಿತಸ್ಥ ಎಂದು ಯಾವುದೇ ನಿಯಂತ್ರಕ ಪ್ರಾಧಿಕಾರ ಅಥವಾ ನ್ಯಾಯಾಲಯ ಎಂದಿಗೂ ಹೇಳಿಲ್ಲ. 2023ರಲ್ಲಿ ಸೆಬಿ ಮತ್ತು ಮಾಧ್ಯಮಗಳ ಪರಿಶೀಲನೆಗೊಳಪಟ್ಟ ಬಳಿಕ ಅದು ಶುದ್ಧವಾಗಿ ಹೊರಹೊಮ್ಮಿದೆ ಮತ್ತು ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಪುನರ್‌ನಿರ್ಮಿಸಿದೆ ಎಂದು ಹೇಳಿದರು.
ಮಾನಹಾನಿಕರ ಲೇಖನಗಳು ಕಂಪನಿಯ ಬ್ಯಾಲೆನ್ಸ್ ಶೀಟ್ ಮೇಲೆ ಒತ್ತಡ ಹೇರಬಹುದು, ಯೋಜನೆಗಳ ಅನುಷ್ಠಾನವನ್ನು ವಿಳಂಬಿಸಬಹುದು, ಹೂಡಿಕೆದಾರರು ಬಿಲಿಯಗಟ್ಟಲೆ ಹಣವನ್ನು ಕಳೆದುಕೊಳ್ಳುವಂತೆ ಮಾಡಬಹದು, ಮಾರುಕಟ್ಟೆಯಲ್ಲಿ ಭೀತಿಯನ್ನು ಸೃಷ್ಟಿಸಬಹುದು, ಜಾಗತಿಕ ಮಟ್ಟದಲ್ಲಿ ಕಂಪನಿಯ ಕುರಿತು ಸದ್ಭಾವಕ್ಕೆ ಮತ್ತು ವರ್ಚಸ್ಸಿಗೆ ಹಾನಿಯುಂಟು ಮಾಡಬಹುದು, ಜೊತೆಗೆ ಪ್ರಸ್ತುತ ಮತ್ತು ಭವಿಷ್ಯದ ವ್ಯವಹಾರಗಳಿಗೆ ನಷ್ಟವುಂಟಾಗಬಹುದು ಹಾಗೂ ನಿಧಿಗಳನ್ನು ಸಂಗ್ರಹಿಸುವ ಕಂಪನಿಯ ಸಾಮರ್ಥ್ಯಕ್ಕೆ ಅಡ್ಡಿಯುಂಟಾಗಬಹುದು ಎಂದು ವಾದಿ ದೂರಿದ್ದಾರೆ ಎಂದು ನ್ಯಾಯಾಲಯವು ತಿಳಿಸಿತು.
ಪ್ರಕರಣವು ಮೇಲ್ನೋಟಕ್ಕೆ ವಾದಿಯ ಪರವಾಗಿದೆ ಎಂದು ಹೇಳಿದ ನ್ಯಾಯಾಲಯವು, ಮುಂದಿನ ವಿಚಾರಣಾ ದಿನಾಂಕದವರೆಗೆ ಪ್ರತಿವಾದಿಗಳು ಎಇಎಲ್ ವಿರುದ್ಧ ಪರಿಶೀಲಸಲ್ಪಡದ, ಮಾನಹಾನಿಕರ ವರದಿಗಳನ್ನು ಪ್ರಕಟಿಸುವುದನ್ನು ನಿರ್ಬಂಧಿಸಿತು.
ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳಿಗೆ ಅನುಗುಣವಾಗಿ ಅಧಿಸೂಚಿಸಿದ 36 ಗಂಟೆಗಳಲ್ಲಿ ಮಾನಹಾನಿಕರ ವಿಷಯಗಳನ್ನು ತೆಗೆದುಹಾಕುವಂತೆ ಅವುಗಳಿಗೆ ಇಂಟರ್ನೆಟ್‌ನಲ್ಲಿ ಸ್ಥಳಾವಕಾಶ ಒದಗಿಸುವ ಮಧ್ಯವರ್ತಿಗಳಿಗೂ ನ್ಯಾಯಾಲಯವು ನಿರ್ದೇಶನ ನೀಡಿತು.
ಪ್ರಕರಣದ ಮುಂದಿನ ವಿಚಾರಣೆಯು ಅ.9ರಂದು ನಡೆಯಲಿದೆ.