ತೆಲಂಗಾಣ: ಸಿಪಿಐ ನಾಯಕನ ಗುಂಡಿಕ್ಕಿ ಹತ್ಯೆ
Photo credit: PTI
ಹೈದರಾಬಾದ್: ತೆಲಂಗಾಣದ ಸಿಪಿಐ ನಾಯಕನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಮಲಕ್‌ಪಟ್‌ನಲ್ಲಿ ಹತ್ಯೆ ನಡೆದಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ರಾಜ್ಯ ಮಂಡಳಿಯ ಸದಸ್ಯ ಕೆ ಚಂಡು ನಾಯಕ್ (47) ಮೃತಪಟ್ಟವರು.
ನಾಯಕ್ ಅವರು ಬೆಳಿಗ್ಗೆ 7.30 ರ ಸುಮಾರಿಗೆ ಉದ್ಯಾನವನದ ಬಳಿ ಬೆಳಿಗ್ಗೆಯ ವಿಹಾರ ನಡೆಸುತ್ತಿರುವ ವೇಳೆ, ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಅನೇಕ ಸುತ್ತುಗಳ ಗುಂಡಿನ ದಾಳಿ ನಡೆಸಿದ್ದಾರೆ.
ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ತನಿಖೆಯನ್ನು ಪ್ರಾರಂಭಿಸಿದೆ. ಗುಂಡಿನ ದಾಳಿಯಲ್ಲಿ ಕನಿಷ್ಠ ಮೂರು-ನಾಲ್ಕು ಜನರು ಭಾಗಿಯಾಗಿದ್ದಾರೆ, ಗುಂಡಿನ ದಾಳಿಯಲ್ಲಿ ಕೇವಲ ಒಂದು ಆಯುಧವನ್ನು ಮಾತ್ರ ಬಳಸಲಾಗಿದೆ ಎಂದು ತೋರುತ್ತದೆ ಎಂದು ಪೊಲೀಸ್ ಆಯುಕ್ತ ಚೈತನ್ಯ ಕುಮಾರ್ ಹೇಳಿದರು.
ಹಳೆಯ ವೈಷಮ್ಯ ದಾಳಿಯ ಹಿಂದಿನ ಕಾರಣ ಎಂದು ಶಂಕಿಸಲಾಗಿದೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಹತ್ತು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಚಂದು ನಾಯಕ್ ಅವರು 2022 ರಲ್ಲಿ ದಾಖಲಾದ ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.