×
Ad

‌ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಆರೆಸ್ಸೆಸ್ ಅನ್ನು ಶ್ಲಾಘಿಸಿರುವುದು ಹುತಾತ್ಮರಿಗೆ ತೋರಿದ ಅಗೌರವ: ಸಿಪಿಎಂ ಟೀಕೆ

Update: 2025-08-16 16:18 IST

 ಪ್ರಧಾನಿ ನರೇಂದ್ರ ಮೋದಿ (Photo: PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಶ್ಲಾಘಿಸಿರುವುದು ತೀವ್ರ ವಿಷಾದಕರವಾಗಿದೆ ಎಂದು ಶುಕ್ರವಾರ ಸಿಪಿಎಂ ಆಕ್ಷೇಪಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಮಹಾತ್ಮ ಗಾಂಧಿಯ ಹತ್ಯೆಯ ನಂತರ ನಿಷೇಧಕ್ಕೊಳಗಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಕೊಡುಗೆ ನೀಡಿರಲಿಲ್ಲ. ಪ್ರತಿ ಬಾರಿಯೂ ರಾಷ್ಟ್ರೀಯ ಐಕ್ಯತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿತ್ತು ಎಂದು ಟೀಕಿಸಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ನಕಲಿ ಐತಿಹಾಸಿಕ ದಾಖಲೆ ಹೊಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಶ್ಲಾಘಿಸಿರುವುದು ತೀವ್ರ ವಿಷಾದಕರವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಡ್ರೀಯ ಸ್ವಯಂಸೇವಕ ಸಂಘದ ಯಾವುದೇ ಪಾತ್ರವಿರಲಿಲ್ಲ ಹಾಗೂ ನಿರಂತರವಾಗಿ ದೇಶದ ಐಕ್ಯತೆಯನ್ನು ಮಣ್ಣುಗೂಡಿಸಲು ಧಾರ್ಮಿಕ ನೆಲೆಯಲ್ಲಿ ಯತ್ನಿಸಿತ್ತು.‌ ಕೋಮು ಗಲಭೆಗಳು ಹಾಗೂ ಇನ್ನಿತರ ಹಿಂಸಾಚಾರದಲ್ಲಿ ಅದರ ಪಾತ್ರವನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಮಹಾತ್ಮ ಗಾಂಧಿಯವರ ಹತ್ಯೆ ಆರೋಪದಲ್ಲಿ ಅದನ್ನು ನಿಷೇಧಿಸಲಾಗಿತ್ತು" ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಶುಕ್ರವಾರ ದಿಲ್ಲಿಯ ಕೆಂಪು ಕೋಟೆಯಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವದಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ವಿಶ್ವದ ಅತಿ ದೊಡ್ಡ ಸರಕಾರೇತರ ಸಂಸ್ಥೆಯಾಗಿದ್ದು, ಅದು ಸದಾ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ" ಎಂದು ಶ್ಲಾಘಿಸಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News