×
Ad

ಬಿಹಾರ ಪತನದ ಬಳಿಕ ಇಂಡಿಯಾ ಕೂಟದಲ್ಲಿ ಬಿರುಕು; ನಿರ್ಗಮನಕ್ಕೆ ಮಿತ್ರಪಕ್ಷಗಳ ಚಿಂತನೆ

Update: 2025-11-21 09:36 IST

PC: x.com/ndtv

ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಇಂಡಿಯಾ ಮೈತ್ರಿಕೂಟದಲ್ಲಿ ಒಡಕು ಕಾಣಿಸಿಕೊಂಡಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಕಾರ್ಯತಂತ್ರ, ನಾಯಕತ್ವ ಮತ್ತು ವಿಶ್ವಾಸಾರ್ಹತೆಯನ್ನು ಹಲವು ಪ್ರಾದೇಶಿಕ ಪಕ್ಷಗಳು ಬಹಿರಂಗವಾಗಿ ಪ್ರಶ್ನಿಸಿವೆ.

ಆಂತರಿಕ ಮಟ್ಟದಲ್ಲೇ ಹೊಗೆಯಾಡುತ್ತಿದ್ದ ಅಸಮಾಧಾನ ಇದೀಗ ಬಹಿರಂಗ ಟೀಕೆಗಳಾಗಿ ಮಾರ್ಪಟ್ಟಿದ್ದು, ಮೈತ್ರಿಕೂಟದಿಂದ ಕಳಚಿಕೊಳ್ಳುವ ಬಗ್ಗೆಯೂ ಚಿಂತನೆಗಳು ಪಕ್ಷ ಮಟ್ಟದಲ್ಲಿ ನಡೆಯುತ್ತಿವೆ.

ಚುನಾವಣೆಗೆ ಮುನ್ನವೇ ಜಾರ್ಖಂಡ್ ಮುಕ್ತಿ ಮೋರ್ಚಾ, ಸೀಟು ಹೊಂದಾಣಿಕೆ ಚೌಕಟ್ಟಿನಿಂದ ಹೊರನಡೆದಿತ್ತು. ಸೀಟು ಹಂಚಿಕೆ ಮಾತುಕತೆ ವೇಳೆ ದೊಡ್ಡ ಪಕ್ಷಗಳು ಮೂಲೆಗುಂಪು ಮಾಡಿವೆ ಹಾಗೂ ಹಿಂದಿನ ಮಾತುಕತೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಜೆಎಂಎಂ ಆಪಾದಿಸಿತ್ತು.

ಏತನ್ಮಧ್ಯೆ ಬಿಹಾರ ತೀರ್ಪಿನ ಇಡೀ ಪ್ರಕ್ರಿಯೆ ಹಾಗೂ ಕಾರ್ಯತಂತ್ರವನ್ನು ಶಿವಸೇನೆ (ಯುಬಿಟಿ) ಟೀಕಿಸಿದೆ. ಇದು ವಿರೋಧ ಪಕ್ಷಗಳಿಗೆ ಎಚ್ಚರಿಕೆ ಗಂಟೆ ಎಂದು ವಿಶ್ಲೇಷಿಸಿದ್ದು, ಹಿರಿಯ ಮುಖಂಡರು ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸುವ ಜತೆಗೆ ಇಂಡಿಯಾ ಮೈತ್ರಿಕೂಟದ ಆಂತರಿಕ ಸಮನ್ವಯವನ್ನೂ ಪ್ರಶ್ನಿಸಿದ್ದಾರೆ.

ಸಮಾಜವಾದಿ ಪಕ್ಷ ರಾಚನಿಕ ಪುನರ್ರಚನೆಗೆ ಆಗ್ರಹಿಸಿದ್ದು, ಬಿಹಾರದಲ್ಲಿ ವಿಧಿವಿಧಾನಗಳ ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದಾರೆ. ಇಂಥ ಆಡಳಿತಾತ್ಮಕ ಹಸ್ತಕ್ಷೇಪಗಳು ಭವಿಷ್ಯದಲ್ಲಿ ಸ್ಪರ್ಧೆಯನ್ನೇ ಹಳಿತಪ್ಪಿಸಲು ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ಆಮ್ ಆದ್ಮಿ ಪಾರ್ಟಿ ಮೊದಲೇ ನಿರ್ಧಾರ ಕೈಗೊಂಡಿತ್ತು. ರಾಷ್ಟ್ರಮಟ್ಟದ ವೇದಿಕೆಯೇ ದುರ್ಬಲವಾಗಿರುವಾಗ ರಾಜ್ಯಮಟ್ಟದ ವಿಸ್ತರಣೆಯನ್ನು ಬಲಿಕೊಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಏಕಾಂಗಿಯಾಗಿ ಸ್ಪರ್ಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News