×
Ad

ದಿಲ್ಲಿಯ ನೂತನ 31 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ: ಎಡಿಆರ್ ವರದಿ

Update: 2025-02-10 21:45 IST

PC : adrindia.org

ಹೊಸದಿಲ್ಲಿ: ದಿಲ್ಲಿಯ ನೂತನ 70 ಶಾಸಕರಲ್ಲಿ ಮೂರನೇ ಒಂದು ಅಥವಾ ಶೇ. 44 ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಶಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.

ಒಟ್ಟು ಶಾಸಕರಲ್ಲಿ 17 ಅಥವಾ ಶೇ. 24 ಮಂದಿ ಹತ್ಯೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿರುವುದು ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ದಿಲ್ಲಿ ವಿಧಾನಸಭೆ ಚುನಾವಣೆ ಫೆಬ್ರವರಿ 5ರಂದು ನಡೆದಿತ್ತು. ಶನಿವಾರ ಮತ ಎಣಿಕೆ ನಡೆದಿತ್ತು. ದಿಲ್ಲಿ ವಿಧಾನ ಸಭೆಯ 70 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಆಮ್ ಆದ್ಮಿ ಪಕ್ಷ ಕೇವಲ 22 ಸ್ಥಾನಗಳಲ್ಲಿ ಮಾತ್ರ ಗೆಲವು ಸಾಧಿಸಿತ್ತು.

ನೂತನ ಚುನಾಯಿತ ಶಾಸಕರ ಸ್ವ ಪ್ರಮಾಣಿತ ಅಫಿಡಾವಿಟ್ ಅನ್ನು ಅಸೋಸಿಯೇಶನ್ ಫಾರ್ ಡೇಮಾಕ್ರೆಟಿಕ್ ರಿಫಾರ್ಮ್ಸ್ ವಿಶ್ಲೇಷಣೆ ನಡೆಸಿದೆ.

ಬಿಜೆಪಿಯ 16 ಅಥವಾ ಶೇ. 33 ಶಾಸಕರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು. ಇನ್ನೊಂದೆಡೆ ಆಮ್ ಆದ್ಮಿ ಪಕ್ಷದ 15 ಅಥವಾ ಶೇ. 68 ಶಾಸಕರು ಇಂತಹ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಬಿಜೆಪಿ ಶಾಸಕರು ಆಮ್ ಆದ್ಮಿ ಪಕ್ಷದ ಶಾಸಕರಿಗಿಂತ ಗಣನೀಯ ಶ್ರೀಮಂತರಾಗಿದ್ದಾರೆ ಎಂದು ಕೂಡ ವರದಿ ಗಮನ ಸೆಳೆದಿದೆ. ಬಿಜೆಪಿಯ ಶಾಸಕರ ಸೊತ್ತಿನ ಸರಾಸರಿ ಮೌಲ್ಯ 28.5 ಕೋ. ರೂಪಾಯಿ. ಆಮ್ ಆದ್ಮಿ ಪಕ್ಷದ ಶಾಸಕರ ಸೊತ್ತಿನ ಸರಾಸರಿ ಮೌಲ್ಯ 7.7 ಕೋ. ರೂಪಾಯಿ.

ಮೂವರು ಶ್ರೀಮಂತ ಶಾಸಕರು ಬಿಜೆಪಿಯವರು. ಶಕುರ್ ಬಸ್ತಿಯ ಬಿಜೆಪಿ ಶಾಸಕ ಕರ್ನೈಲ್ ಸಿಂಗ್ ಅವರ ಸೊತ್ತಿನ ಮೌಲ್ಯ 259 ಕೋ.ರೂ. ಇದ್ದು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಬುರಾರಿಯ ಆಪ್ ಶಾಸಕ ಸಂಜೀವ್ ಝಾ ಅವರು ಅತ್ಯಂತ ಕಡಿಮೆ ಸೊತ್ತನ್ನು ಹೊಂದಿದ್ದು, ಅವರ ಸೊತ್ತಿನ ಮೌಲ್ಯ ಕೇವಲ 14 ಲಕ್ಷ ರೂ.

ದಿಲ್ಲಿ ವಿಧಾನ ಸಭೆ ಹೆಚ್ಚಾಗಿ ಪುರುಷ ಪ್ರಧಾನವಾಗಿಯೇ ಮುಂದುವರಿದಿದೆ. ಜಯ ಗಳಿಸಿದ ಒಟ್ಟು ಅಭ್ಯರ್ಥಿಗಳಲ್ಲಿ ಕೇವಲ 5 ಅಥವಾ ಶೇ. 7 ಮಾತ್ರ ಮಹಿಳೆಯರು. ಈ ಶಾಸಕಿಯರ ಸಂಖ್ಯೆಯನ್ನು 2020ಕ್ಕೆ ಹೋಲಿಸಿದರೆ, ಇಳಿಕೆಯಾಗಿದೆ. ಕಳೆದ ವರ್ಷ ಶಾಸಕಿಯರ ಪ್ರಮಾಣ ಶೇ. 11 ಇತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News