ಮಹಿಳೆಯರು ದಾಖಲಿಸುವ ಎಲ್ಲ ಕ್ರಿಮಿನಲ್ ಪ್ರಕರಣಗಳೂ ಅಕ್ಷರಶಃ ಸತ್ಯ ಎಂದು ಭಾವಿಸಬೇಕಿಲ್ಲ: ಕೇರಳ ಹೈಕೋರ್ಟ್
Photo : PTI
ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಅಮಾಯಕರನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವ ಪ್ರವೃತ್ತಿ ಕಂಡು ಬರುತ್ತಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ಮಹಿಳೆಯರು ದಾಖಲಿಸುವ ಎಲ್ಲ ಪ್ರಕರಣಗಳನ್ನೂ ಅಕ್ಷರಶಃ ಸತ್ಯ ಎಂದು ಭಾವಿಸಬೇಕಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಾಜಿ ಮಹಿಳಾ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪಕ್ಕೆ ಗುರಿಯಾಗಿರುವ ವ್ಯಕ್ತಿಯೊಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ನ್ಯಾ. ಪಿ.ವಿ.ಕುನ್ಹಿಕೃಷ್ಣನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಲಿ ಪ್ರಕರಣದಲ್ಲಿ ಸದರಿ ಮಹಿಳಾ ಉದ್ಯೋಗಿಯನ್ನು ಸಮರ್ಪಕವಾಗಿ ಕೆಲಸ ನಿರ್ವಹಿಸದ ಕಾರಣಕ್ಕೆ ವಜಾಗೊಳಿಸಿದ್ದಕ್ಕೆ, ಆಕೆ ನನ್ನನ್ನು ಮೌಖಿಕವಾಗಿ ನಿಂದಿಸಿ, ಬೆದರಿಕೆ ಒಡ್ಡಿದ್ದಾಳೆ ಎಂದು ಆರೋಪಿಯು ನೀಡಿದ್ದ ಪ್ರಾಥಮಿಕ ದೂರಿನ ಕುರಿತು ಪೊಲೀಸರು ತನಿಖೆ ನಡೆಸಿಲ್ಲ ಎಂದು ಹೈಕೋರ್ಟ್ ಹೇಳಿತು.
“ಏಕೈಕ ದೂರುದಾರರು ನೀಡಿದ ದೂರನ್ನೇ ಆಧರಿಸಿ, ಆಕೆ ಮಹಿಳೆ ಎಂಬ ಒಂದೇ ಕಾರಣಕ್ಕೆ ಏಕಪಕ್ಷೀಯ ತನಿಖೆ ನಡೆಯಕೂಡದು. ಎಲ್ಲ ಪ್ರಕರಣಗಳಲ್ಲೂ ಮಹಿಳೆಯರ ದೂರುಗಳು ಅಕ್ಷರಶಃ ಸತ್ಯವಾಗಿರುತ್ತವೆ ಹಾಗೂ ಆರೋಪಿಯ ದೂರನ್ನು ಪರಿಗಣಿಸದೆ ಮಹಿಳೆಯ ಹೇಳಿಕೆಯನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಳ್ಳಬಹುದು ಎಂಬ ಪೂರ್ವನಿರ್ಧಾರ ಕೂಡದು” ಎಂದು ನ್ಯಾಯಾಲಯ ಎಚ್ಚರಿಸಿತು.
“ಇತ್ತೀಚಿನ ದಿನಗಳಲ್ಲಿ ಅಮಾಯಕರನ್ನು ಲೈಂಗಿಕ ದೌರ್ಜನ್ಯದಂಥ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವ ಪ್ರವೃತ್ತಿ ಕಂಡು ಬರುತ್ತಿದೆ” ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
“ಒಂದು ವೇಳೆ ಪುರುಷರ ವಿರುದ್ಧ ಮಹಿಳೆಯರು ಮಾಡಿದ ಆರೋಪಗಳು ಸುಳ್ಳು ಎಂದು ಕಂಡು ಬಂದರೆ, ಪೊಲೀಸರು ಅಂತಹ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಳಬಹುದು. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ” ಎಂದೂ ನ್ಯಾಯಾಲಯ ಹೇಳಿತು.