ಕ್ರಿಪ್ಟೊ ಕರೆನ್ಸಿ ವಂಚನೆ; 200 ಕೋ.ರೂ.ಗೂ ಅಧಿಕ ಮೊತ್ತ ಕಳೆದುಕೊಂಡ ಸಾವಿರಾರು ಜನ
Photo: newindianexpress.com
ಶಿಮ್ಲಾ: ಕ್ರಿಪ್ಟೊ ಕರೆನ್ಸಿಯ ಬೇಡಿಕೆ ಉತ್ತುಂಗದಲ್ಲಿದ್ದ 2018ರಲ್ಲಿ, ಹಿಮಾಚಲ ಪ್ರದೇಶದಲ್ಲಿನ ವಂಚಕರು ಕೆಆರ್‌ಒ ಮತ್ತು ಡಿಜಿಟಿ ಎಂಬ ಕ್ರಿಪ್ಟೊ ನಾಣ್ಯಗಳನ್ನು ಮುದ್ರಿಸಿ ಸಾವಿರಾರು ಮಂದಿ ಹೂಡಿಕೆದಾರರಿಗೆ ರೂ. 200 ಕೋಟಿಗೂ ಹೆಚ್ಚು ಮೊತ್ತವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು newindianexpress.com ವರದಿ ಮಾಡಿದೆ.
ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ದೊಡ್ಡ ಲಾಭವಾಗುತ್ತದೆ ಹಾಗೂ ಹೂಡಿಕೆದಾರರ ಜಾಲವನ್ನು ನಿರ್ಮಿಸಬಹುದು ಎಂದು ಜನರನ್ನು ನಂಬಿಸಿರುವ ಗುಂಪೊಂದು ಈ ಕೃತ್ಯವೆಸಗಿದೆ ಎಂದು ಆರೋಪಿಸಲಾಗಿದೆ.
ಈ ಆಮಿಷಕ್ಕೆ ಬಲಿಯಾಗಿ ಪ್ರಾಥಮಿಕ ಹೂಡಿಕೆದಾರರಾಗಿರುವವರು ಚೈನ್ ಲಿಂಕ್ ಮಾದರಿಯ ಈ ಯೋಜನೆಯಲ್ಲಿ ಇತರ ಜನರು ಹೂಡಿಕೆ ಮಾಡುವಂತೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಪಕ್ಷೇತರ ಅಭ್ಯರ್ಥಿ ಹೋಶ್ಯಾರ್ ಸಿಂಗ್, ಕಾಂಗ್ರಾ ಹಾಗೂ ಹಮೀರ್ ಪುರ್ ಗಳಲ್ಲಿ ಜನರಿಂದ ಸಂಗ್ರಹಿಸಿರುವ ಹಣದ ಮೊತ್ತವೇ ರೂ. 200 ಕೋಟಿಯನ್ನು ಮೀರುತ್ತದೆ ಎಂದು ಆರೋಪಿಸಿದ್ದಾರೆ.
ಹೋಶ್ಯಾರ್ ಸಿಂಗ್ ಅವರು ಸದನದಲ್ಲಿ ಮಾಡಿದ ಭಾಷಣದ ಬೆನ್ನಿಗೇ, ಈ ವಿಷಯದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಹಾಗೂ ಉಪ ಪೊಲೀಸ್ ಮಹಾ ನಿರೀಕ್ಷಕ (ಉತ್ತರ ವಲಯ) ಅಭಿಷೇಕ್ ಧುಲ್ಲರ್, ಜನರಿಗೆ ವಂಚಿಸಲಾಗಿರುವ ನಿಖರ ಮೊತ್ತವನ್ನು ಇನ್ನಷ್ಟೇ ಅಂದಾಜಿಸಬೇಕಿದೆ ಎಂದು ಹೇಳಿದ್ದಾರೆ.
ಈ ವಂಚನೆಯ ಸಂಬಂಧ ಈವರೆಗೆ ಐದು ಮಂದಿಯನ್ನು ಬಂಧಿಸಲಾಗಿದ್ದು, ಈ ವಂಚನೆಯ ರೂವಾರಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ