×
Ad

ಕಟಕ್‌ನಲ್ಲಿ ಕೋಮು ಉದ್ವಿಗ್ನತೆ: 36 ಗಂಟೆಗಳ ಕರ್ಫ್ಯೂ, ಇಂಟರ್ನೆಟ್ ಗೆ ನಿಷೇಧ

ಪೊಲೀಸರೊಂದಿಗೆ ಘರ್ಷಣೆ; ಕಲ್ಲು ತೂರಾಟ: 25 ಮಂದಿಗೆ ಗಾಯ

Update: 2025-10-06 14:01 IST

Photo credit: PTI

ಕಟಕ್: ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹಿಂಸಾತ್ಮಕವಾಗಿ ವರ್ತಿಸಿದ್ದು, ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ್ದರಿಂದ ಒಡಿಶಾದ ಕಟಕ್ ನಗರವು ರವಿವಾರ ಕೋಮು ಉದ್ವಿಗ್ನತೆಯಿಂದ ತೀವ್ರ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಘಟನೆಯಲ್ಲಿ ಎಂಟು ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 25 ಮಂದಿ ಗಾಯಗೊಂಡಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಅಧಿಕಾರಿಗಳು ತುರ್ತು ಕ್ರಮವಾಗಿ 36 ಗಂಟೆಗಳ ಕರ್ಫ್ಯೂ ವಿಧಿಸಿ, ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ನಗರದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಶಾಂತಿ ಕಾಪಾಡಲು ಕ್ರಮಗಳು ಕೈಗೊಳ್ಳಲಾಗಿದೆ.

ಶುಕ್ರವಾರ ರಾತ್ರಿ ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆಯ ವೇಳೆ ಉದ್ವಿಗ್ನತೆ ಉಲ್ಬಣಗೊಂಡಿತ್ತು.

ಝಂಜಿರಿಮಂಗಲ ಭಗಬತ್ ಪೂಜಾ ಸಮಿತಿಯ ಮೆರವಣಿಗೆಯಲ್ಲಿ ಜೋರಾಗಿ ಸಂಗೀತ ನುಡಿಸಿದ ಹಿನ್ನೆಲೆಯಲ್ಲಿ ಕೆಲವು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ವಾಗ್ವಾದ ಉಲ್ಬಣಗೊಂಡು ಕಲ್ಲು ತೂರಾಟ ನಡೆದಿದೆ. ಉಪ ಪೊಲೀಸ್ ಆಯುಕ್ತ ರಿಷಿಕೇಶ್ ಖಿಲಾರಿ ಸೇರಿದಂತೆ ಅನೇಕರು ಗಾಯಗೊಂಡಿದ್ದರು.

ಪೊಲೀಸರು ಶನಿವಾರದಿಂದಲೇ ಭದ್ರತೆ ಹೆಚ್ಚಿಸಿದರೂ, ರವಿವಾರ ಒಂದು ಸಂಘಟನೆಯು ಬೈಕ್ ರ್ಯಾಲಿ ನಡೆಸಲು ಅನುಮತಿ ಕೋರಿತು. ಪರಿಸ್ಥಿತಿ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಅದನ್ನು ನಿರಾಕರಿಸಲಾಯಿತು. ನಿರಾಕರಣೆಯ ನಡುವೆಯೂ ಕೆಲವು ಸದಸ್ಯರು ರ್ಯಾಲಿ ನಡೆಸಲು ಮುಂದಾದರು. ಇದರ ಪರಿಣಾಮವಾಗಿ ಮತ್ತೊಮ್ಮೆ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವ ಘಟನೆಗಳು ನಡೆದವು.

“ರ್ಯಾಲಿಗೆ ಅನುಮತಿ ನೀಡಲಾಗಿರಲಿಲ್ಲ. ಆದರೂ ಕೆಲವು ಮಂದಿ ನಿಯಮ ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದರು. ಆಗ ಘರ್ಷಣೆ ನಡೆಯಿತು. ಎಂಟು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ", ಎಂದು ಪೊಲೀಸ್ ಆಯುಕ್ತ ಸುರೇಶ್ ದೇಬದುತ್ತ ಸಿಂಗ್ ಅವರು ಹೇಳಿದ್ದಾರೆ.

ಅಧಿಕಾರಿಗಳು ನಗರದಲ್ಲಿ 36 ಗಂಟೆಗಳ ಕರ್ಫ್ಯೂ ಜಾರಿಗೊಳಿಸಿದ್ದು, 24 ಗಂಟೆಗಳ ಇಂಟರ್ನೆಟ್ ನಿಷೇಧ ವಿಧಿಸಿದ್ದಾರೆ.

“ಶಾಂತಿಯನ್ನು ಕದಡಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿದ್ದರೆ ನಿಷೇಧ ವಿಸ್ತರಿಸಲಾಗುವುದು”, ಎಂದು ಕಟಕ್ ಜಿಲ್ಲಾಧಿಕಾರಿ ಹೇಳಿದ್ದಾರೆ.

ಗೌರಿ ಶಂಕರ್ ಪಾರ್ಕ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗಲಭೆಕೋರರು ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದಾಗ ಅವರ ಮೇಲೂ ಕಲ್ಲು ತೂರಾಟ ನಡೆದಿದೆ. ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದ್ದು, ನಗರದಾದ್ಯಂತ ರೂಟ್ ಮಾರ್ಚ್ ಮೂಲಕ ಶಾಂತಿ ಕಾಪಾಡುವ ಪ್ರಯತ್ನ ನಡೆಯುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, “ಕಟಕ್ ನಗರವು ಶತಮಾನಗಳ ಇತಿಹಾಸ ಹೊಂದಿರುವ ಸಹೋದರತ್ವದ ಸಂಕೇತವಾಗಿದೆ. ಕೆಲ ದುಷ್ಕರ್ಮಿಗಳು ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ" ಎಂದು ಹೇಳಿದ್ದಾರೆ.

ದುರ್ಗಾ ವಿಸರ್ಜನೆ ಸಂದರ್ಭದಲ್ಲಿ ಯಾರೂ ಮೃತಪಟ್ಟಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರವು ಕಟಕ್ ಮುನ್ಸಿಪಲ್ ಕಾರ್ಪೊರೇಷನ್, ಕಟಕ್ ಅಭಿವೃದ್ಧಿ ಪ್ರಾಧಿಕಾರ (CDA) ಮತ್ತು 42 ಮೌಜಾ ಪ್ರದೇಶಗಳಲ್ಲಿ ಸೋಮವಾರ ಸಂಜೆ 7 ಗಂಟೆಯವರೆಗೆ ವಾಟ್ಸಾಪ್, ಫೇಸ್‌ಬುಕ್, ಎಕ್ಸ್ (ಟ್ವಿಟ್ಟರ್) ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಬಳಕೆಯನ್ನು ನಿಷೇಧಿಸಿದೆ.

ಈ ಕ್ರಮವನ್ನು 1885ರ ಭಾರತೀಯ ಟೆಲಿಗ್ರಾಫ್ ಕಾಯ್ದೆ (ಸೆಕ್ಷನ್ 5(2)) ಹಾಗೂ ಟೆಲಿಕಾಂ ಸೇವೆಗಳ ತಾತ್ಕಾಲಿಕ ಸ್ಥಗಿತಗೊಳಿಸುವಿಕೆ ನಿಯಮಗಳು, 2017ರ ಅಡಿಯಲ್ಲಿ ಕೈಗೊಳ್ಳಲಾಗಿದೆ.

ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಶಾಸಕಿ ಸೋಫಿಯಾ ಫಿರ್ದೌಸ್ ಮತ್ತು ಮಾಜಿ ಶಾಸಕಿ ಎಂ.ಡಿ. ಮೋಕ್ವಿಮ್ ಇಬ್ಬರೂ ಘಟನೆಯನ್ನು ಖಂಡಿಸಿದ್ದಾರೆ.

"ಕಟಕ್ ಯಾವಾಗಲೂ ಏಕತೆಯ ಸಂಕೇತವಾಗಿದೆ. ಶಾಂತಿಯನ್ನು ಪುನಃಸ್ಥಾಪಿಸಲು ಎಲ್ಲರೂ ಕೈಜೋಡಿಸಬೇಕು", ಎಂದು ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News