×
Ad

ಮಧ್ಯಪ್ರದೇಶ | ಬಾಲಕಿಯರನ್ನೇ ಗುರಿಯಾಗಿಸಿ ಅತ್ಯಾಚಾರ, ಕೊಲೆ : ಮರಣದಂಡನೆ ರದ್ಧತಿ ಬಳಿಕ ಸರಣಿ ಅತ್ಯಾಚಾರಿಯಿಂದ ಮತ್ತೊಂದು ಕೃತ್ಯ

Update: 2025-02-19 21:45 IST

Photo | NDTV

ಭೋಪಾಲ್: ಮಧ್ಯಪ್ರದೇಶದ ನರಸಿಂಗ್‌ಗಢದಲ್ಲಿ 11ರ ಹರೆಯದ ಶ್ರವಣ ಮತ್ತು ವಾಕ್ ದೋಷವಿರುವ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಮೇಶ್ ಸಿಂಗ್‌ನನ್ನು ಬಂಧಿಸಲಾಗಿದೆ. ಈತನ ಇತಿಹಾಸವನ್ನು ಕೆದಕಿದಾಗ ಈತ ಈ ಮೊದಲು ಇಂತಹ ಸರಣಿ ಕೃತ್ಯಗಳನ್ನು ನಡೆಸಿರುವುದು ಬಯಲಾಗಿದೆ.

ಫೆಬ್ರವರಿ 1ರಂದು 11ರ ಹರೆಯದ ಶ್ರವಣ ಮತ್ತು ವಾಕ್ ದೋಷವಿರುವ ಬಾಲಕಿ ನರಸಿಂಗ್‌ಗಢದ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಮರುದಿನ ಬೆಳಿಗ್ಗೆ ಬಾಲಕಿ ಪೊದೆಯೊಂದರ ಬಳಿ ಅಸ್ವಸ್ಥಗೊಂಡು ಬಿದ್ದುಕೊಂಡಿದ್ದಳು. ಬಾಲಕಿಯ ದೇಹದ ಮೇಲೆ ಗಂಭೀರ ಸ್ವರೂಪದ ಗಾಯಗಳು ಕಂಡು ಬಂದಿತ್ತು. ವೈದ್ಯಕೀಯ ಪರೀಕ್ಷೆಯಲ್ಲೂ ಬಾಲಕಿಯ ಮೇಲೆ ಹಲ್ಲೆ ನಡೆದಿರುವುದು ದೃಢಪಟ್ಟಿದೆ. ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಾಗ ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಫೆಬ್ರವರಿ 8ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. 46 ಸ್ಥಳಗಳಲ್ಲಿನ 136 ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕೆಂಪು ಶಾಲು ಮತ್ತು ನೀಲಿ-ಕಪ್ಪು ಬಣ್ಣದ ಶೂ ಧರಿಸಿದ ಶಂಕಿತ ವ್ಯಕ್ತಿ ಕೃತ್ಯ ನಡೆದ ಸ್ಥಳದಲ್ಲಿ ತಿರುಗಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ರಮೇಶ್ ಸಿಂಗ್ ಅಪರಾಧಿ ಎಂದು ಪತ್ತೆ ಹಚ್ಚಿದ್ದಾರೆ. ಪೊಲೀಸರು ಆತನನ್ನು ಜೈಪುರಕ್ಕೆ ಹೋಗುವ ರೈಲಿನಲ್ಲಿ ಬಂಧಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜಗಢ ಎಸ್ಪಿ ಆದಿತ್ಯ ಮಿಶ್ರಾ, ಪ್ರಕರಣದ ಕುರಿತು ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸಾಕ್ಷ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮರಣದಂಡನೆ ಶಿಕ್ಷೆಯಿಂದ ಪಾರಾಗಿದ್ದ ಆರೋಪಿ!

ರಮೇಶ್ ಸಿಂಗ್ ಈ ಮೊದಲು ಕೂಡ ಅಪ್ರಾಪ್ತ ಬಾಲಕಿಯರನ್ನು ಗುರಿಯಾಗಿಸಿಕೊಂಡು ಅತ್ಯಾಚಾರ, ಕೊಲೆಯಂತಹ ಕೃತ್ಯವನ್ನು ನಡೆಸಿದ್ದಾನೆ. ಆದರೆ ನ್ಯಾಯಾಲಯಗಳಿಂದ ಪದೇ ಪದೇ ಖುಲಾಸೆಗೊಂಡಿದ್ದಾನೆ.

2003ರಲ್ಲಿ ಮಧ್ಯಪ್ರದೇಶದ ಶಜಾಪುರ ಜಿಲ್ಲೆಯ ಮುಬರಿಕ್ಪುರ ಗ್ರಾಮದಲ್ಲಿ 5ರ ಹರೆಯದ ಬಾಲಕಿಯ ಮೇಲೆ ಪೋಲಯ್ಕಲದ ದಬ್ರಿಪುರ ನಿವಾಸಿ ರಮೇಶ್ ಸಿಂಗ್ ಅತ್ಯಾಚಾರ ಎಸಗಿದ್ದ. ಆತನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಶಿಕ್ಷೆಯನ್ನು ಅನುಭವಿಸಿ 2013ರಲ್ಲಿ ಬಿಡುಗಡೆಯಾಗಿದ್ದ.

2014ರಲ್ಲಿ ಮಧ್ಯಪ್ರದೇಶದ ಅಷ್ಟಾ(ಸೆಹೋರ್)ನಲ್ಲಿ 8ರ ಹರೆಯದ ಬಾಲಕಿಯನ್ನು ಅಪಹರಿಸಿ ರಮೇಶ್ ಸಿಂಗ್ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. 2019ರಲ್ಲಿ ಹೈಕೋರ್ಟ್ ಈ ತೀರ್ಪನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News