ಉತ್ತರಾಖಂಡ: ಸಮಾನ ನಾಗರಿಕ ಸಂಹಿತೆ ಜಾರಿಗೆ ಬಂದಲ್ಲಿ ಲಿವ್-ಇನ್ ಸಂಬಂಧಗಳಿಗೆ ನೋಂದಣಿ ಕಡ್ಡಾಯ
ಉತ್ತರಾಖಂಡ ವಿಧಾನಸಭೆಯಲ್ಲಿ ಸಮಾನ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಲಾಯಿತು (Photo: PTI)
ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ಮಂಡಿಸಲಾದ ಸಮಾನ ನಾಗರಿಕ ಸಂಹಿತೆ ಜಾರಿಯಾಗಿದ್ದೇ ಆದಲ್ಲಿ ರಾಜ್ಯದಲ್ಲಿ ಲಿವ್-ಇನ್ ಸಂಬಂಧದಲ್ಲಿರುವ ಎಲ್ಲರೂ ಕಡ್ಡಾಯವಾಗಿ ನೋಂದಣಿ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಲಿವ್-ಇನ್ ಸಂಬಂಧ ಮುರಿದು ಬಿದ್ದರೂ ಸ್ಥಳೀಯ ಸಂಬಂಧಿತ ಪ್ರಾಧಿಕಾರಗಳಿಗೆ ಸೂಚಿಸಬೇಕಾಗುತ್ತದೆ.
ಲಿವ್-ಇನ್ ಸಂಬಂಧ ನೋಂದಣಿಗೆ ಅರ್ಜಿ ಸಲ್ಲಿಸಿದ ನಂತರ ಸ್ಥಳೀಯ ರಿಜಿಸ್ಟ್ರಾರ್ ಅವರು ಪರಿಶೀಲನೆ ನಡೆಸಿ ಈ ಲಿವ್-ಇನ್ ಸಂಬಂಧ ಯಾವುದೇ ರೀತಿಯಲ್ಲಿ ಕಾನೂನುಬಾಹಿರವಲ್ಲ ಎಂಬುದನ್ನು ಖಚಿತಪಡಿಸುತ್ತಾರೆ.
ಲಿವ್-ಇನ್ ಸಂಬಂಧದ ನೋಂದಣಿಗೆ ನಿಗದಿತ ನಮೂನೆಯಲ್ಲಿ (ಸ್ಟೇಟ್‌ಮೆಂಟ್ ಆಫ್ ಲಿವ್-ಇನ್ ರಿಲೇಷನ್‌ಶಿಪ್) ಅರ್ಜಿ ಸಲ್ಲಿಸಬೇಕಾಗುತ್ತದೆ. ಸಂಬಂಧ ಕೊನೆಗೊಂಡಾಗ ಅಥವಾ ಮುರಿದು ಬಿದ್ದಾಗ “ಸ್ಟೇಟ್‌ಮೆಂಟ್ ಆಫ್ ಟರ್ಮಿನೇಷನ್ ಆಫ್ ರಿಲೇಷನ್‌ಶಿಪ್” ಸಲ್ಲಿಸಬೇಕಾಗುತ್ತದೆ.
ಉತ್ತರಾಖಂಡದಲ್ಲಿರುವ ಎಲ್ಲಾ ಅವಿವಾಹಿತ ಜೋಡಿಗಳಿಗೆ ಈ ನಿಯಮ ಸಮಾನ ನಾಗರಿಕ ಸಂಹಿತೆ ಜಾರಿಗೆ ಬಂದಾಗ ಅನ್ವಯವಾಗುತ್ತದೆ. ಈ ಜೋಡಿಗಳು ಉತ್ತರಾಖಂಡ ನಿವಾಸಿಗಳಿರಲಿ ಅಥವಾ ಅಲ್ಲಿಗೆ ಆಗಮಿಸುವ ಪ್ರವಾಸಿಗರಿರಲಿ ಎಲ್ಲರಿಗೂ ಅನ್ವಯವಾಗುತ್ತದೆ. ವಿವಾಹಯೋಗ್ಯ ವಯಸ್ಸಿನವರೇ ಹಾಗೂ ಇಬ್ಬರೂ ಈ ಸಂಬಂಧಕ್ಕಿಂತ ಮೊದಲು ʼಸಿಂಗಲ್ʼ ಆಗಿದ್ದರೇ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇಲ್ಲಿ ಸಿಂಗಲ್ ಎಂದರೆ ಅವಿವಾಹಿತರು ಮಾತ್ರವಲ್ಲದೆ ಈ ಹಿಂದೆ ಯಾವುದೇ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ಇಲ್ಲದವರಾಗಿರಬೇಕಾಗುತ್ತದೆ.
ಲಿವ್-ಇನ್ ಸಂಬಂಧಗಳ ಬಗ್ಗೆ ನೋಂದಣಿಗೆ ಒಂದು ತಿಂಗಳು ಕಾಲಾವಕಾಶವಿರುತ್ತದೆ ಇಲ್ಲದೇ ಹೋದಲ್ಲಿ ರೂ 10,000 ವರೆಗೆ ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು.
ಆದರೆ ಈ ಮಸೂದೆಯ ನಿಬಂಧನೆಗಳು ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವುದಿಲ್ಲ.