ಬಿಹಾರ | ಮೃತ ಎಂದು ಘೋಷಿತಗೊಂಡಿದ್ದ ವ್ಯಕ್ತಿ ಮುಖ್ಯ ಚುನಾವಣಾಧಿಕಾರಿ ಎದುರು ಜೀವಂತವಾಗಿ ಹಾಜರ್!
“ಅಧಿಕಾರಿಗಳಿಗೆ ನಾನು ಪ್ರೇತದಂತೆ ಕಾಣಿಸುತ್ತಿದ್ದೇನಾ?”
ಪಟ್ನಾ: ಚುನಾವಣಾ ಆಯೋಗದಿಂದ ಮೃತ ಎಂದು ಘೋಷಿತಗೊಂಡಿದ್ದ ಬಿಹಾರದ ಭೋಜ್ಪುರ್ ಜಿಲ್ಲೆಯ ವ್ಯಕ್ತಿಯೊಬ್ಬರು ತಾನು ಜೀವಂತವಾಗಿದ್ದೇನೆ ಎಂದು ಮುಖ್ಯ ಚುನಾವಣಾಧಿಕಾರಿ ಎದುರು ಹಾಜರಾಗಿರುವ ಘಟನೆ ವರದಿಯಾಗಿದೆ.
ಈ ವಾರದ ಆರಂಭದಲ್ಲಿ ಸುಪ್ರೀಂ ಕೋರ್ಟ್ ಎದುರು ಹಾಜರುಪಡಿಸಲಾಗಿದ್ದ ಮಿಂಟು ಪಾಸ್ವಾನ್ ಎಂಬ ವ್ಯಕ್ತಿಯನ್ನು ಸಿಪಿಐ(ಎಂಎಲ್)-ಲಿಬರೇಷನ್ ಪಕ್ಷದ ನಿಯೋಗವು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಕರೆದೊಯ್ದಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಿಂಟು ಪಾಸ್ವಾನ್, “ನಾನು ಅಧಿಕಾರಿಗಳಿಗೆ ಪ್ರೇತದಂತೆ ಕಾಣಿಸುತ್ತಿದ್ದೀನೇನೊ ತಿಳಿದಿಲ್ಲ. ವಾಸ್ತವವೆಂದರೆ, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿ ನನ್ನನ್ನು ಮೃತ ಎಂದು ಘೋಷಿಸಲಾಗಿದೆ ಎಂಬ ಸುದ್ದಿ ತಿಳಿದು ನಾನು ವಿಚಲಿತನಾದೆ” ಎಂದು ತಿಳಿಸಿದ್ದಾರೆ.
ನನ್ನ ನಿವಾಸಕ್ಕೆ ಯಾವುದೇ ಮತಗಟ್ಟೆ ಅಧಿಕಾರಿಯೂ ಭೇಟಿ ನೀಡಿರಲಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
“ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಪಕ್ಷದೆ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುತ್ತಿರುವುದೇ ಇಂತಹ ವೈಪರೀತ್ಯಗಳ ಕಾರಣಕ್ಕೆ. ಮಿಂಟು ಪಾಸ್ವಾನ್ ಈ ಹಿಂದೆ ಮತ ಚಲಾಯಿಸಿದ್ದರೂ, ನೂತನ ಮತದಾರರ ನೋಂದಣಿಗೆಂದು ಮೀಸಲಾಗಿರುವ ಅರ್ಜಿ ಸಂಖ್ಯೆ 6 ಅನ್ನು ಭರ್ತಿ ಮಾಡುವಂತೆ ಅವರಿಗೆ ಸೂಚಿಸಲಾಗಿದೆ” ಎಂದು ಈ ವೇಳೆ ಮಿಂಟು ಪಾಸ್ವಾನ್ ರೊಂದಿಗೆ ಉಪಸ್ಥಿತರಿದ್ದ ಸಿಪಿಐ(ಎಂಎಲ್)-ಲಿಬರೇಷನ್ ಪಕ್ಷದ ಕಾರ್ಯದರ್ಶಿ ಕುನಾಲ್ ತಿಳಿಸಿದ್ದಾರೆ.
ತನ್ನ ಅವಿವೇಕದಿಂದ ಈಗಾಗಲೇ ಬಯಲಾಗಿರುವ ಮತಗಟ್ಟೆ ಅಧಿಕಾರಿಗೆ ಅರ್ಜಿ ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿಗಳು ಆತನಿಗೆ ಸೂಚಿಸಿದರು ಎಂದೂ ಅವರು ಆರೋಪಿಸಿದ್ದಾರೆ.
“ತನ್ನ ತಪ್ಪಿಗೆ ಕ್ಷಮೆ ಯಾಚಿಸಿದ ಮತಗಟ್ಟೆ ಅಧಿಕಾರಿಯು, ಬೇರೊಬ್ಬರ ಹೆಸರನ್ನು ತೆಗೆದು ಹಾಕುವ ಬದಲು ಮಿಂಟು ಪಾಸ್ವಾನ್ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗೆ ತಿಳಿಸಿದರು” ಎಂದು ಅವರು ಹೇಳಿದ್ದಾರೆ.
ಮತಗಟ್ಟೆ ಅಧಿಕಾರಿ ಸತ್ಯವನ್ನೇ ಹೇಳಿದ್ದು, ಮೃತ ವ್ಯಕ್ತಿಯ ಹೆಸರು ಕರಡು ಮತಪಟ್ಟಿಯಲ್ಲಿರಬೇಕು. ಈ ತಪ್ಪಿನಿಂದ ಮಿಂಟು ಪಾಸ್ವಾನ್ ಕಂಬದಿಂದ ಕಂಬಕ್ಕೆ ಸುತ್ತುವಂತಾಗಿದೆ ಎಂದು ಅವರು ದೂರಿದರು.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುನಾಲ್, “ನಾವು ಇಲ್ಲಿಯವರೆಗೆ ಮೃತಪಟ್ಟಿದ್ದಾರೆ ಎಂದು ತಪ್ಪಾಗಿ ಘೋಷಿಸಿರುವ 21 ಮಂದಿಯನ್ನು ಗುರುತಿಸಿದ್ದು, ಅವರೆಲ್ಲರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈ ಪೈಕಿ 10 ಮಂದಿಯನ್ನು ಸುಪ್ರೀಂ ಕೋರ್ಟ್ ಎದುರು ಹಾಜರುಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.