×
Ad

ಭಾರತದಲ್ಲಿ ರಣಹದ್ದುಗಳ ಸಂಖ್ಯೆಯಲ್ಲಿ ಕುಸಿತ | 5 ವರ್ಷಗಳಲ್ಲಿ ಐದು ಲಕ್ಷ ಮಾನವರ ಸಾವಿಗೆ ಕಾರಣ : ವರದಿ

Update: 2024-07-27 21:19 IST

PC : NDTV 

ಹೊಸದಿಲ್ಲಿ : 1990ರ ದಶಕದಲ್ಲಿ ಭಾರತದಲ್ಲಿ ರಣಹದ್ದುಗಳು ಅಳಿವಿಗೆ ಸಮೀಪವಿದ್ದದ್ದು ಪ್ರಾಣಿಗಳ ಕಳೇಬರಗಳಿಂದ ಮಾರಣಾಂತಿಕ ಬ್ಯಾಕ್ಟೀರಿಯಾ ಮತ್ತು ಸೋಂಕುಗಳು ಹರಡಲು ಕಾರಣವಾಗಿತ್ತು ಮತ್ತು ಇದರಿಂದಾಗಿ ಐದು ವರ್ಷಗಳಲ್ಲಿ ಐದು ಲಕ್ಷ ಜನರು ಮೃತಪಟ್ಟಿದ್ದರು ಎಂದು ಅಮೇರಿಕನ್ ಇಕನಾಮಿಕ್ಸ್ ಅಸೋಸಿಯೇಷನ್ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ತಿಳಿಸಿದೆ.

ರಣಹದ್ದುಗಳ ಸಂಖ್ಯೆಯಲ್ಲಿ ಕುಸಿತದಿಂದಾಗಿ 2000 ಮತ್ತು 2005ರ ನಡುವೆ ದೇಶವು ವಾರ್ಷಿಕ 58,621 ಕೋಟಿ ರೂ.ಗಳ ಆರ್ಥಿಕ ಹಾನಿಗಳನ್ನು ಅನುಭವಿಸಿತ್ತು ಎಂದು ಅಧ್ಯಯನವು ಅಂದಾಜಿಸಿದೆ.

ರಣಹದ್ದುಗಳು ಭಾರತೀಯ ಪರಿಸರ ವ್ಯವಸ್ಥೆಗೆ ಅತ್ಯಂತ ಅಗತ್ಯವಾಗಿರುವ ಪಕ್ಷಿಗಳಲ್ಲಿ ಒಂದಾಗಿವೆ ಎಂದು ವರದಿಯು ತಿಳಿಸಿದೆ. ಹೀಗಿದ್ದರೂ ರೈತರು ರೋಗಗಳಿಂದ ನರಳುತ್ತಿದ್ದ ತಮ್ಮ ಜಾನುವಾರುಗಳಿಗೆ ಡೈಕ್ಲೋಫೆನಾಕ್ ಉರಿಯೂತ ನಿವಾರಕ ಔಷಧಿಯನ್ನು ನೀಡಲು ಆರಂಭಿಸಿದ ಬಳಿಕ ರಣಹದ್ದುಗಳ ಸಂಖ್ಯೆಯು ತೀವ್ರವಾಗಿ ಕುಸಿದಿತ್ತು. ರಣಹದ್ದುಗಳ ಮೂತ್ರಪಿಂಡಗಳಿಗೆ ಮಾರಣಾಂತಿಕವಾಗಿರುವ ಡೈಕ್ಲೋಫೆನಾಕ್ ಜಾನುವಾರುಗಳ ಕಳೇಬರಗಳಲ್ಲಿ ಉಳಿದುಕೊಂಡಿತ್ತು ಮತ್ತು ಅವುಗಳನ್ನು ಭಕ್ಷಿಸಿದ್ದ ರಣಹದ್ದುಗಳ ಸಾವಿಗೆ ಕಾರಣವಾಗಿತ್ತು.

2006ರಲ್ಲಿ ಭಾರತ ಸರಕಾರವು ಡೈಕ್ಲೋಫೆನಾಕ್‌ನ್ನು ನಿಷೇಧಿಸಿತ್ತು. ಆದರೆ ಆ ವೇಳೆಗಾಗಲೇ ಡೈಕ್ಲೋಫೆನಾಕ್ ಪ್ರಭಾವದಿಂದ ಐದು ಕೋಟಿಗಳಷ್ಟಿದ್ದ ರಣಹದ್ದುಗಳ ಸಂಖ್ಯೆ ಕೆಲವೇ ಸಾವಿರಗಳಿಗೆ ಕುಸಿದಿತ್ತು. ಇದರಿಂದಾಗಿ ಪ್ರಾಣಿಗಳ ಕಳೇಬರಗಳನ್ನು ಕೊಳೆಯಲು ಬಿಡಲಾಗಿತ್ತು ಮತ್ತು ಇದರಿಂದ ಸೋಂಕುಗಳು ಹಾಗೂ ಇತರ ರೋಗಗಳ ಹರಡುವಿಕೆ ಸುಲಭವಾಗಿತ್ತು.

ಅಧ್ಯಯನಕ್ಕಾಗಿ 600ಕ್ಕೂ ಅಧಿಕ ಜಿಲ್ಲೆಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. 1994ಕ್ಕಿಂತ ಮೊದಲು ಈ ಜಿಲ್ಲೆಗಳಲ್ಲಿ ಮಾನವ ಸಾವಿನ ಸರಾಸರಿ ಪ್ರಮಾಣ ಪ್ರತಿ ಒಂದು ಸಾವಿರ ವ್ಯಕ್ತಿಗಳಿಗೆ ಶೇ.0.9ರಷ್ಟಿತ್ತು ಎನ್ನುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು. ಇದು ನಿರ್ದಿಷ್ಟ ಜಿಲ್ಲೆಯೊಂದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಣಹದ್ದುಗಳಿದ್ದವೇ ಎನ್ನುವುದನ್ನು ಕಂಡುಕೊಳ್ಳಲು ಆಧಾರವಾಗಿತ್ತು.

2005ರ ಅಂತ್ಯದ ವೇಳೆಗೆ ಸಾಂಪ್ರದಾಯಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಣಹದ್ದುಗಳಿದ್ದ ಪ್ರದೇಶಗಳಲ್ಲಿ ಮನುಷ್ಯರ ಸಾವುಗಳಲ್ಲಿ ಸರಾಸರಿ ಶೇ.4.7ರಷ್ಟು ಏರಿಕೆ ದಾಖಲಾಗಿತ್ತು. ಅಂದರೆ ವರ್ಷಕ್ಕೆ ಹೆಚ್ಚುವರಿಯಾಗಿ ಅಂದಾಜು 1,04,386 ಜನರು ಮೃತಪಟ್ಟಿದ್ದರು. ಸಾಮಾನ್ಯವಾಗಿ ರಣಹದ್ದುಗಳು ಕಂಡು ಬಂದಿರದಿದ್ದ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಶೇ.0.9ರಲ್ಲಿ ಸ್ಥಿರವಾಗಿ ಉಳಿದಿತ್ತು ಎನ್ನುವುದನ್ನು ಅಧ್ಯಯನವು ಕಂಡುಕೊಂಡಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News