ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ಮಾನಹಾನಿ ಮೊಕದ್ದಮೆ: ಅರ್ಜಿದಾರ ಬಿಜೆಪಿ ನಾಯಕನಿಗೆ ಐದು ಸಾವಿರ ರೂ. ದಂಡ ವಿಧಿಸಿದ ದಿಲ್ಲಿ ನ್ಯಾಯಾಲಯ
ಧ್ರುವ್ ರಾಠಿ / ಸುರೇಶ್ ನಖುವಾ (Photo source: X)
ಹೊಸದಿಲ್ಲಿ: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ವಿರುದ್ಧ ಸಲ್ಲಿಕೆಯಾಗಿದ್ದ ಮಾನಹಾನಿ ಮೊಕದ್ದಮೆ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರ ಹಾಗೂ ಬಿಜೆಪಿಯ ನಾಯಕ ಸುರೇಶ್ ನಖುವಾ ಮತ್ತೊಂದು ಬಾರಿ ವಿಚಾರಣೆಯ ಮುಂದೂಡಿಕೆಗಾಗಿ ಮನವಿ ಮಾಡಿದ್ದರಿಂದ, ದಿಲ್ಲಿಯ ನ್ಯಾಯಾಲಯವೊಂದು ಅವರಿಗೆ ಐದು ಸಾವಿರ ರೂ. ದಂಡ ವಿಧಿಸಿದೆ ಎಂದು barandbench.com ವರದಿ ಮಾಡಿದೆ.
ಜುಲೈ 5, 2024ರಲ್ಲಿ ಯೂಟ್ಯೂಬರ್ ಧ್ರುವ್ ರಾಠಿ ಪೋಸ್ಟ್ ಮಾಡಿದ್ದ "My reply to Godi Youtubers/Elvish Yadav/Dhruv Rather" ಎಂಬ ಶೀರ್ಷಿಕೆಯ ವಿಡಿಯೊ ವಿರುದ್ಧ ಮುಂಬೈ ಬಿಜೆಪಿ ಘಟಕದ ವಕ್ತಾರ ಸುರೇಶ್ ನಖುವಾ ಮಾನಹಾನಿ ಮೊಕದ್ದಮೆ ಹೂಡಿದ್ದರು.
ನನ್ನನ್ನು ನಿಂದಕ ಟ್ರೋಲ್‌ಗಳಿಗೆ ಹೋಲಿಸಲಾಗಿದೆ ಹಾಗೂ ಈ ಆರೋಪಗಳನ್ನು ಯಾವುದೇ ಅಧಾರ ಅಥವಾ ಕಾರಣವಿಲ್ಲದೆ ಮಾಡಲಾಗಿದೆ. ಇದರಿಂದಾಗಿ ನನ್ನ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ ಎಂದು ಸುರೇಶ್ ನಖುವಾ ಆರೋಪಿಸಿದ್ದರು.
ಧ್ರುವ್ ರಾಠಿಯ ಆರೋಪದಿಂದಾಗಿ ನಾನು ವ್ಯಾಪಕ ಖಂಡನೆ ಹಾಗೂ ವ್ಯಂಗ್ಯಕ್ಕೆ ಗುರಿಯಾಗಬೇಕಾಯಿತು ಎಂದೂ ಅವರು ಆರೋಪಿಸಿದ್ದರು.
ಸೆಪ್ಟೆಂಬರ್ 2024ರಲ್ಲಿ ಈ ವಿಷಯದ ಕುರಿತು ಸುರೇಶ್ ನಖುವಾ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಲೋಪವೊಂದನ್ನು ಪತ್ತೆ ಹಚ್ಚಿದ್ದ ನ್ಯಾಯಾಲಯ, ಆ ಲೋಪವನ್ನು ಸರಿಪಡಿಸಿದ ನಂತರ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ಅವರಿಗೆ ಸೂಚಿಸಿತ್ತು.
ಅದರಂತೆ ಸುರೇಶ್ ನಖುವಾ ನ್ಯಾಯಾಲಯಕ್ಕೆ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಈ ಬಾರಿಯೂ ಧ್ರುವ್ ರಾಠಿ ಪರ ವಕೀಲರು ತಿದ್ದುಪಡಿ ಮಾಡಲಾದ ಪ್ರಮಾಣ ಪತ್ರದಲ್ಲೂ ಲೋಪವಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಹೀಗಾಗಿ, ಸದರಿ ಪ್ರಮಾಣ ಪತ್ರವನ್ನು ದೃಢೀಕರಿಸಿದ ನೋಟರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತ್ತು.
ಆದರೆ, ಮೂಳೆ ಮುರಿತದ ಕಾರಣವೊಡ್ಡಿ ಇಲ್ಲಿಯವರೆಗೆ ನೋಟರಿ ನ್ಯಾಯಾಲಯದೆದುರು ಹಾಜರಾಗಿಲ್ಲ. ಇಂದಿನ ವಿಚಾರಣೆಯ ಸಂದರ್ಭದಲ್ಲಿ ಸುರೇಶ್ ನಖುವಾ ಪರ ಹಾಜರಾಗಿದ್ದ ನೂತನ ವಕೀಲ ಜಗದೀಶ್ ತ್ರಿವೇದಿ, ನನ್ನ ವಕಾಲತ್ತು ದಾಖಲಾಗುವವರೆಗೂ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆದರೆ, ಧ್ರುವ್ ರಾಠಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಸಾತ್ವಿಕ್ ವರ್ಮ ಹಾಗೂ ವಕೀಲ ನಕುಲ್ ಗಾಂಧಿ ವಿಚಾರಣೆಯ ಮುಂದೂಡಿಕೆಗೆ ಆಕ್ಷೇಪಿಸಿದರಲ್ಲದೆ, ಇಲ್ಲಿಯವರೆಗಿನ ಸುರೇಶ್ ನಖುವಾರ ವರ್ತನೆಯನ್ನು ಪ್ರಶ್ನಿಸಿದರು.
ಧ್ರುವ್ ರಾಠಿ ಪರ ವಕೀಲರ ವಾದವನ್ನು ಮನ್ನಿಸಿದ ನ್ಯಾ. ಪ್ರೀತಂ ಸಿಂಗ್, ಪ್ರಕರಣದ ವಿಚಾರಣೆಯ ಮುಂದೂಡಿಕೆಗೆ ಕೋರಿದ ಸುರೇಶ್ ನಖುವಾರಿಗೆ ಐದು ಸಾವಿರ ರೂ. ದಂಡ ವಿಧಿಸಿ, ಮಾರ್ಚ್ 11, 2026ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು.