×
Ad

ದಿಲ್ಲಿ | 14 ವರ್ಷದ ಬಾಲಕನ ವಿವಸ್ತ್ರಗೊಳಿಸಿ, ಇರಿದು ಹತ್ಯೆ

Update: 2025-07-03 20:38 IST

ಸಾಂದರ್ಭಿಕ ಚಿತ್ರ

 

ಹೊಸದಿಲ್ಲಿ: ನಾಲ್ವರು ಅಪ್ರಾಪ್ತರು ಸೇರಿದಂತೆ 8 ಮಂದಿಯ ತಂಡವೊಂದು 14 ವರ್ಷದ ಬಾಲಕನನ್ನು ವಿವಸ್ತ್ರಗೊಳಿಸಿ, ಹತ್ಯೆಗೈದಿದೆ. ಬಳಿಕ ಆತನ ಮೃತದೇಹವನ್ನು ಉತ್ತರದಿಲ್ಲಿಯ ಹೊರವಲಯದ ಹೈದರ್‌ಪುರ ಪ್ರದೇಶದಲ್ಲಿರುವ ಕಾಲುವೆಯ ಸಮೀಪ ಎಸೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸಿರ್ಸಾಪುರದ ಜೀವನ್ ಪಾರ್ಕ್‌ನ ನಿವಾಸಿಯಾಗಿದ್ದ ಬಾಲಕನನ್ನು ಸೇಡಿನ ಹಿನ್ನೆಲೆಯಲ್ಲಿ ಹತ್ಯೆಗೈಯಲಾಗಿದೆ ಎಂದು ಅವರು ಹೇಳಿದ್ದಾರೆ.

ಬಾಲಕನ ಮೃತದೇಹ ಹಲವು ಇರಿತದ ಗಾಯಗಳೊಂದಿಗೆ ಹಾಗೂ ಕುತ್ತಿಗೆಗೆ ಸ್ಕಾರ್ಫ್ ಕಟ್ಟಿದ ಸ್ಥಿತಿಯಲ್ಲಿ ಮುನಾಕ್ ಕಾಲುವೆಯ ಸಮೀಪ ಜುಲೈ 1ರಂದು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿ ಜಲ ಮಂಡಳಿಯ ಜಲ ಸಂಸ್ಕರಣ ಘಟಕದ ಸಮೀಪ ಮೃತದೇಹವೊಂದು ಪತ್ತೆಯಾಗಿರುವುದಾಗಿ ಸಂಜೆ ಸುಮಾರು 3:10ಕ್ಕೆ ಪಿಸಿಆರ್ ಕರೆ ಸ್ವೀಕರಿಸಿತ್ತು. ಅನಂತರ ಪೊಲೀಸ್ ತಂಡ ಭಾಗಶಃ ಕೊಳೆತ ಮೃತದೇಹವನ್ನು ಗುರುತಿಸಿತು ಎಂದು ಅವರು ತಿಳಿಸಿದ್ದಾರೆ.

‘‘ಪ್ರಾಥಮಿಕ ಮಾಹಿತಿಯ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಹಾಗೂ ಬಂಧಿಸಲು ಹಲವು ತಂಡಗಳನ್ನು ರಚಿಸಲಾಗಿದೆ’ ಎಂದು ಡಿಸಿಪಿ (ಉತ್ತರ ಹೊರವಲಯ) ಹರೇಶ್ವರ್ ಸ್ವಾಮಿ ತಿಳಿಸಿದ್ದಾರೆ.

ತಾಂತ್ರಿಕ ಕಣ್ಗಾವಲನ್ನು ಬಳಸಿ ಮೃತಪಟ್ಟ ಬಾಲಕ ವಾಸಿಸುತ್ತಿದ್ದ ಪ್ರದೇಶದಲ್ಲೇ ವಾಸಿಸುತ್ತಿದ್ದ ಇಬ್ಬರು ಮುಖ್ಯ ಆರೋಪಿಗಳಾದ ಕೃಷ್ಣ ಆಲಿಯಾಸ್ ಬೋಲಾ (18) ಹಾಗೂ ಅಪ್ರಾಪ್ತನೋರ್ವನನ್ನು ಪೊಲೀಸರು ಮೊದಲಿಗೆ ಬಂಧಿಸಿದ್ದಾರೆ ಅವರು ಹೇಳಿದ್ದಾರೆ.

ಸ್ಥಳೀಯ ಕ್ರಿಮಿನಲ್‌ ಗಳಾದ ಮೋನು ಹಾಗೂ ಸೋನು ಕಳೆದ ವರ್ಷ ಕೃಷ್ಣನಿಗೆ ಹಲ್ಲೆ ನಡೆಸಿದ್ದರು. ಈ ವಿಷಯದಲ್ಲಿ ಮೋನು ಹಾಗೂ ಸೋನುಗೆ ಬಾಲಕ ಮಾಹಿತಿ ನೀಡಿರುವುದಾಗಿ ಕೃಷ್ಣ ಸಂದೇಹಿಸಿದ್ದ ಎಂದು ಅವರು ತಿಳಿಸಿದ್ದಾರೆ.

‘‘ಈ ಹಿನ್ನೆಲೆಯಲ್ಲಿ ಕೃಷ್ಣ ಬಾಲಕನ ಬಗ್ಗೆ ಸೇಡು ಹೊಂದಿದ್ದ. ಅಲ್ಲದೆ, ತನ್ನ ಸಹವರ್ತಿಗಳೊಂದಿಗೆ ಕಳೆದ ವಾರ ಬಾಲಕನ ಹತ್ಯೆಗೆ ಸಂಚು ರೂಪಿಸಿದ್ದ. ಜೂನ್ 29ರಂದು ತಡ ರಾತ್ರಿ ಕೃಷ್ಣ ಹಾಗೂ ಇತರ 7 ಮಂದಿ ವೀರ್ ಚೌಕ್ ಬಝಾರ್ ಸಮೀಪ ಬಾಲಕನನ್ನು ಅಡ್ಡಗಟ್ಟಿದ್ದಾರೆ. ಅಲ್ಲದೆ, ಆತನ ಗೆಳೆಯರ ಎದುರಿನಿಂದಲೇ ಅಪಹರಿಸಿ ಕಾಲುವೆಯ ಸಮೀಪ ಕರೆದೊಯ್ದಿದ್ದಾರೆ. ಅಲ್ಲಿ ಆತನಿಗೆ ಹಲವು ಬಾರಿ ಇರಿದು ಹತ್ಯೆಗೈದಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News