Assam | ಬಾಂಗ್ಲಾದೇಶಿ ವಲಸಿಗ, ವಿದೇಶಿ ಎಂದು ಘೋಷಿಸಲಾಗಿದ್ದ ಮಹಿಳೆಗೆ CAA ಮೂಲಕ ಪೌರತ್ವ!
ದೀಪಾಲಿ ದಾಸ್ | Photo Credit : X
ಗುವಾಹಟಿ, ಮಾ. 7: ಅಸ್ಸಾಂನ ಕಛಾರ್ ಜಿಲ್ಲೆಯಲ್ಲಿ ವಿದೇಶಿ ಎಂದು ಘೋಷಿಸಿದ ಬಳಿಕ ಎರಡು ವರ್ಷಗಳ ಕಾಲ ಬಂಧನದಲ್ಲಿದ್ದ ಮಹಿಳೆಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಈ ಮಹಿಳೆಯನ್ನು 59 ವರ್ಷದ ದೀಪಾಲಿ ದಾಸ್ ಎಂದು ಗುರುತಿಸಲಾಗಿದೆ. ಇವರು ಧೊಲಾಯಿ ವಿಧಾನಸಭಾ ಕ್ಷೇತ್ರದ ಹವಾಯ್ತಾಂಗ್ ಪ್ರದೇಶದ ನಿವಾಸಿ.
ಇವರನ್ನು 2019ರ ಫೆಬ್ರವರಿಯಲ್ಲಿ ವಿದೇಶಿಗರ ನ್ಯಾಯಮಂಡಳಿ (ಎಫ್‌ಟಿ) ಅಕ್ರಮ ವಲಸಿಗರೆಂದು ಘೋಷಿಸಿತ್ತು. ಅಸ್ಸಾಂನಲ್ಲಿ ದೀಪಾಲಿ ಅವರನ್ನು ಮೊಟ್ಟಮೊದಲು ವಿದೇಶಿ ಎಂದು ಘೋಷಿಸಲಾಗಿತ್ತು.
ನ್ಯಾಯಮಂಡಳಿ ಘೋಷಿಸಿದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದರು. ಅದೇ ವರ್ಷ ಮೇ 10ರಂದು ಅವರನ್ನು ಸಿಲ್ಚಾರ್ ಬಂಧನ ಕೇಂದ್ರಕ್ಕೆ ಕಳುಹಿಸಿದ್ದರು. ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ 2021ರ ಮೇ 17ರಂದು ಜಾಮೀನಿನಲ್ಲಿ ಬಿಡುಗಡೆಯಾಗುವವರೆಗೆ ಎರಡು ವರ್ಷಗಳ ಕಾಲ ಅವರು ಬಂಧನ ಕೇಂದ್ರದಲ್ಲಿದ್ದರು ಎಂದು ಅವರ ವಕೀಲ ಧರ್ಮಾನಂದ ದೇಬ್ ತಿಳಿಸಿದ್ದಾರೆ.
ದೀಪಾಲಿ ಅವರು ಮೂಲತಃ ಬಾಂಗ್ಲಾದೇಶದ ಸಿಲೆಟ್ ಜಿಲ್ಲೆಯ ಧಿರೈ ಪೊಲೀಸ್ ಠಾಣಾ ವ್ಯಾಪ್ತಿಯ ದಿಪ್ಪುರ್ ಗ್ರಾಮದ ನಿವಾಸಿ. ಅವರು ಹಬಿಗಂಜ್ ಜಿಲ್ಲೆಯ ಬನಿಯಾಚೋಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಪರಾಯಿ ಗ್ರಾಮದ ಅಭಿಮನ್ಯು ದಾಸ್ ಅವರನ್ನು 1987ರಲ್ಲಿ ವಿವಾಹವಾಗಿದ್ದರು.
ಈ ದಂಪತಿ 1988ರಲ್ಲಿ ಭಾರತ ಪ್ರವೇಶಿಸಿದ್ದರು. ಕಛಾರ್ ಜಿಲ್ಲೆಗೆ ತೆರಳಿದ್ದರು. ಅನಂತರ ಅವರು ಅಲ್ಲೇ ವಾಸಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.