×
Ad

ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ 52 ಸಾವಿರ ಭಾರತೀಯರು ಸ್ವದೇಶಕ್ಕೆ ವಾಪಾಸು

Update: 2026-03-08 07:30 IST

PC | ANI

ಹೊಸದಿಲ್ಲಿ: ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಸಂಘರ್ಷಪೀಡಿತ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿದ್ದ ಮಾರ್ಚ್ 1-7ರ ಅವಧಿಯಲ್ಲಿ ವಿವಿಧ ವಿಮಾನಗಳಲ್ಲಿ ಸುರಕ್ಷಿತವಾಗಿ 52 ಸಾವಿರ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ವಿಮಾನಗಳಲ್ಲಿ ವಾಪಸ್ಸಾಗಲು ಮುಂದಾಗಿದ್ದಾರೆ ಎಂದು ಹೇಳಿದೆ.

ಇರಾನ್‍ನ ಮೇಲೆ ಕಳೆದ ತಿಂಗಳು ಅಮೆರಿಕ ಹಾಗೂ ಇಸ್ರೇಲ್ ದಾಳಿ ಆರಂಭಿಸಿದ ಬಳಿಕ ಪಶ್ಚಿಮ ಏಷ್ಯಾ ದೇಶಗಳಲ್ಲಿ ನೆಲೆಸಿರುವ ಒಂದು ಕೋಟಿ ಭಾರತೀಯರ ಸುರಕ್ಷತೆ ಬಗ್ಗೆ ಹಾಗೂ ವ್ಯಾಪಾರ ಸರಕುಗಳು ಹಾಗೂ ಇಂಧನ ಪೂರೈಕೆ ಸುವ್ಯವಸ್ಥಿತವಾಗಿ ಮುಂದುವರಿಯಲು ಭಾರತ ಒತ್ತು ನೀಡಿದೆ ಎಂದು ಸಚಿವಾಲಯ ಹೇಳಿದೆ.

ಗಲ್ಫ್ ಪ್ರದೇಶದಲ್ಲಿ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿ ಬಗ್ಗೆ ಸರ್ಕಾರ ತೀವ್ರ ನಿಗಾ ಇರಿಸಿದೆ. ಅದರಲ್ಲೂ ಮುಖ್ಯವಾಗಿ ಅಲ್ಪಾವಧಿ ಪ್ರವಾಸಕ್ಕೆ ತೆರಳಿ ಈ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ಕಲ್ಯಾಣಕ್ಕೆ ಗಮನ ಹರಿಸಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಕಳೆದ ಕೆಲ ದಿನಗಳಿಂದ ಪಶ್ಚಿಮ ಏಷ್ಯಾ ವಾಯುಮಾರ್ಗಗಳನ್ನು ಭಾಗಶಃ ತೆರೆದಿರುವ ಹಿನ್ನೆಲೆಯಲ್ಲಿ ಭಾರತದ ಹಾಗೂ ವಿದೇಶಿ ವಿಮಾನಯಾನ ಸಂಸ್ಥೆಗಳು ವಿಮಾನಗಳ ಕಾರ್ಯಾಚರಣೆ ಆರಂಭಿಸಿವೆ. ಇದರಲ್ಲಿ ನಿಗದಿತ ವೇಳಾಪಟ್ಟಿಯಲ್ಲಿ ಇಲ್ಲದ ವಿಮಾನಗಳು ಕೂಡ ಸೇರಿದ್ದು, ಮಧ್ಯಂತರ ಹಾಗೂ ಅಲ್ಪಾವಧಿ ವೀಸಾ ಹೊಂದಿದ ಭಾರತೀಯ ಪ್ರಯಾಣಿಕರು ವಾಪಸ್ಸಾಗಲು ಇದರಿಂದ ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News