×
Ad

Gujrat | ಬಣ್ಣ ಹಾಕುವ ಕಾರ್ಖಾನೆಯ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಮೂವರು ವಲಸೆ ಕಾರ್ಮಿಕರು ಮೃತ್ಯು, ಇನ್ನೋರ್ವ ಗಂಭೀರ

Update: 2026-03-07 21:44 IST

ಸಾಂದರ್ಭಿಕ ಚಿತ್ರ

ಅಹ್ಮದಾಬಾದ್, ಮಾ. 7: ಗುಜರಾತ್‌ ನ ಸೂರತ್ ನಗರದಲ್ಲಿರುವ ಬಣ್ಣ ಹಾಕುವ ಕಾರ್ಖಾನೆಯ ರಾಸಾಯನಿಕ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಸುರಕ್ಷಾ ಸಾಧನಗಳಿಲ್ಲದೆ ಇಳಿದ ಬಿಹಾರದ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೊಬ್ಬರು ಅಸ್ವಸ್ಥರಾಗಿದ್ದಾರೆ.

ಈ ಘಟನೆ ಪಾಂಡೇಸರ ಜಿಐಡಿಸಿಯ ನ್ಯೂ ಪಾರಸ್ ಡೈಯಿಂಗ್ ಮಿಲ್‌ನ ಜವಳಿ ಸಂಸ್ಕರಣಾ ಘಟಕದಲ್ಲಿ ಗುರುವಾರ ರಾತ್ರಿ ಸ್ವಚ್ಛತಾ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ನಡೆದಿದೆ.

ಪ್ರಾಥಮಿಕ ವರದಿ ಪ್ರಕಾರ, ಸಂಗ್ರಹವಾದ ಅವಶೇಷಗಳನ್ನು ಸ್ವಚ್ಛಗೊಳಿಸಲು ಆಳವಾದ ರಾಸಾಯನಿಕ ಸಂಗ್ರಹ ಟ್ಯಾಂಕ್‌ಗೆ ನಾಲ್ವರು ಕಾರ್ಮಿಕರನ್ನು ಒಬ್ಬರ ನಂತರ ಇನ್ನೊಬ್ಬರು ಇಳಿಯುವಂತೆ ಸೂಚಿಸಲಾಯಿತು. ಆದರೆ, ಟ್ಯಾಂಕ್ ಒಳಗೆ ಆಮ್ಲಜನಕದ ಮಟ್ಟ ಅತ್ಯಂತ ಕಡಿಮೆ ಇತ್ತು ಹಾಗೂ ರಾಸಾಯನಿಕ ಹೊಗೆ ತುಂಬಿಕೊಂಡಿತ್ತು.

ಟ್ಯಾಂಕ್‌ನೊಳಗೆ ಇಳಿದ ಕೂಡಲೇ ಆಮ್ಲಜನಕದ ಕೊರತೆಯಿಂದ ಕಾರ್ಮಿಕರಿಗೆ ಉಸಿರುಕಟ್ಟಲು ಪ್ರಾರಂಭವಾಗಿದೆ. ಒಬ್ಬರ ನಂತರ ಮತ್ತೊಬ್ಬರು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾರೆ. ಇದರಿಂದ ಕಾರ್ಖಾನೆಯಲ್ಲಿ ಆತಂಕದ ವಾತಾವರಣ ಉಂಟಾಯಿತು. ಕಾರ್ಮಿಕರು ಕುಸಿದು ಬೀಳುವುದನ್ನು ಸಹೋದ್ಯೋಗಿ ಕಾರ್ಮಿಕರು ಗಮನಿಸಿದರು. ಕೂಡಲೇ ನಾಲ್ವರು ಕಾರ್ಮಿಕರನ್ನು ಮೇಲೆತ್ತಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಮೂವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಒಬ್ಬ ತೀವ್ರ ಅಸ್ವಸ್ಥಗೊಂಡಿದ್ದಾನೆ.

ಮೃತಪಟ್ಟವರೆಲ್ಲ ಬಿಹಾರದ ರೋಹತಾಸ್ ಜಿಲ್ಲೆಯವರಾಗಿದ್ದು, ಕೆಲಸ ಹುಡುಕಿಕೊಂಡು ಗುಜರಾತ್‌ಗೆ ಬಂದಿದ್ದರು. ಮೃತಪಟ್ಟವರನ್ನು ಅಂಕಿತ್ ಕುಮಾರ್ (19), ಸೋನು ಕುಮಾರ್ ಪಾಸ್ವಾನ್ ಹಾಗೂ ಸಂದೀಪ್ ಪಾಸ್ವಾನ್ (22) ಎಂದು ಗುರುತಿಸಲಾಗಿದೆ. ಇನ್ನೋರ್ವ ಕಾರ್ಮಿಕ ಅಮರೇಂದ್ರ ಕುಮಾರ್ (23) ಪ್ರಸ್ತುತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News