Delhi | ಜಿಮ್ ನತ್ತ ಗುಂಡಿನ ದಾಳಿ, ಹೊಣೆ ಹೊತ್ತುಕೊಂಡ ಬಿಷ್ಣೋಯಿ ಗ್ಯಾಂಗ್
Photo Credit : NDTV
ಹೊಸದಿಲ್ಲಿ, ಜ.13: ಅಪರಿಚಿತ ದುಷ್ಕರ್ಮಿಗಳು ಜಿಮ್‌ವೊಂದರತ್ತ ಗುಂಡುಗಳನ್ನು ಹಾರಿಸಿದ ಘಟನೆ ದಿಲ್ಲಿಯ ಪಶ್ಚಿಮ ವಿಹಾರ ಪ್ರದೇಶದಲ್ಲಿ ಸಂಭವಿಸಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಪಶ್ಚಿಮ ವಿಹಾರದ ಔಟರ್ ರಿಂಗ್ ರೋಡ್‌ನಲ್ಲಿರುವ ‘ಆರ್‌ಕೆ ಫಿಟ್ನೆಸ್’ ಜಿಮ್ ನ ಹೊರಗೆ ಗಾಳಿಯಲ್ಲಿ ಎರಡು ಸುತ್ತು ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ.
ಗುಂಡು ಹಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೋಲಿಸರು ಹೇಳಿದರು.
ಈ ನಡುವೆ ಕುಖ್ಯಾತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ದಾಳಿಯ ಹೊಣೆಯನ್ನು ವಹಿಸಿಕೊಂಡಿದ್ದು, ಅದನ್ನು ದಿಲ್ಲಿ ಪೋಲಿಸರು ಪರಿಶೀಲಿಸುತ್ತಿದ್ದಾರೆ.
‘ನಾನು ಮತ್ತು ಅನಿಲ್ ಪಂಡಿತ್ (ಅಮೆರಿಕಾ) ಆರ್‌ಕೆ ಜಿಮ್ ಮೇಲೆ ದಾಳಿಯನ್ನು ರೂಪಿಸಿದ್ದೆವು. ನಾನು ಜಿಮ್ ಮಾಲಿಕ ರೋಹಿತ್ ಖತ್ರಿಗೆ ಕರೆ ಮಾಡಿದ್ದೆ, ಆದರೆ ಆತ ಅದನ್ನು ನಿರ್ಲಕ್ಷಿಸಿದ್ದ. ಮುಂದಿನ ಸಲ ಕರೆ ಸ್ವೀಕರಿಸದಿದ್ದರೆ ಆತ ಈ ಭೂಮಿಯ ಮೇಲೆ ಇರುವುದಿಲ್ಲ. ಲಾರೆನ್ಸ್ ಭಾಯಿಯ ಯಾವುದೇ ವೈರಿಯು ತನ್ನ ಜೀವಕ್ಕೂ ವೈರಿಯಾಗಿರುತ್ತಾನೆ. ನಾನು ನನ್ನ ಭಾಯಿಗಾಗಿ ಬದುಕಿದ್ದೇನೆ. ನಾನು ಮಾತುಗಳ ಬದಲು ಕೃತ್ಯಗಳ ಮೂಲಕ ತೋರಿಸುವುದರಲ್ಲಿ ನಂಬಿಕೆಯಿಟ್ಟಿದ್ದೇನೆ’ ಎಂದು ರಣ್ ದೀಪ್ ಮಲ್ಲಿಕ್ ಎಂದು ಹೇಳಿಕೊಂಡಿರುವ ವ್ಯಕ್ತಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾನೆ.