ದಿಲ್ಲಿಯಲ್ಲಿ ಇಂದಿನಿಂದ ಹಳೆಯ ವಾಹನಗಳಿಗೆ ಇಂಧನ ಮಾರಾಟ ನಿಷೇಧ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಇಂದಿನಿಂದ (ಜುಲೈ 1) ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹಳೆಯ ವಾಹನಗಳಿಗೆ ಇಂಧನ ಮಾರಾಟ ಮಾಡುವುದರ ಮೇಲೆ ನಿಷೇಧ ಜಾರಿಗೊಳಿಸಲಾಗಿದೆ.
ಇಂತಹ ಹಳೆಯ ವಾಹನಗಳನ್ನು ಪತ್ತೆ ಹಚ್ಚಲು ದಿಲ್ಲಿ ಸರಕಾರ ಸುಮಾರು 350 ಪೆಟ್ರೋಲ್ ಪಂಪ್ ಗಳ ಬಳಿ ಸ್ವಯಂಚಾಲಿತ ಸಂಖ್ಯಾಫಲಕ ರೀಡರ್ ಕ್ಯಾಮೆರಾಗಳನ್ನು ಅಳವಡಿಸಿದೆ.
ಈ ನಿಷೇಧದ ಭಾಗವಾಗಿ, ಸಾರಿಗೆ ಇಲಾಖೆಯ ಸಿಬ್ಬಂದಿಗಳು, ದಿಲ್ಲಿ ಪೊಲೀಸರು, ಸಂಚಾರಿ ಪೊಲೀಸರು ಹಾಗೂ ದಿಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ವಿಸ್ತೃತ ಸಿಬ್ಬಂದಿಗಳ ನಿಯೋಜನೆಯ ಯೋಜನೆಯನ್ನು ದಿಲ್ಲಿ ಸಾರಿಗೆ ಇಲಾಖೆ ರೂಪಿಸಿದೆ.
ದಕ್ಷಿಣ ದಿಲ್ಲಿಯ ವಿವಿಧ ಪೆಟ್ರೋಲ್ ಪಂಪ್ ಗಳ ಬಳಿ ಸಾರಿಗೆ ಇಲಾಖೆ, ಸಂಚಾರಿ ಪೊಲೀಸ್ ಹಾಗೂ ಸ್ಥಳೀಯ ಪೊಲೀಸರ ಹಲವು ತಂಡಗಳನ್ನು ನಿಯೋಜಿಸಲಾಗಿದೆ.
ಈ ಅಭಿಯಾನ ಇಂದು (ಮಂಗಳವಾರ) ಬೆಳಗ್ಗೆ ಆರು ಗಂಟೆಯಿಂದ ಪ್ರಾರಂಭಗೊಂಡಿದ್ದು, 15 ವರ್ಷಗಳಿಗಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಹಾಗೂ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ಇಂಧನ ಮಾರಾಟ ಮಾಡುವುದರ ವಿರುದ್ಧ ಈ ಅಭಿಯಾನದಡಿ ನಿಷೇಧ ಹೇರಲಾಗಿದೆ.