ಕೆಂಪು ಕೋಟೆಯ ಬಳಿ ಕಾರು ಸ್ಫೋಟ ಪ್ರಕರಣ: ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ ಅಮಿತ್ ಶಾ
Photo credit: PTI
ಹೊಸ ದಿಲ್ಲಿ: ದಿಲ್ಲಿಯ ಕೆಂಪು ಕೋಟೆ ಬಳಿ ಭಾರಿ ಸ್ಫೋಟ ಸಂಭವಿಸಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ್ದು, ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿನ ಭದ್ರತಾ ಸ್ಥಿತಿಯ ಅವಲೋಕನ ನಡೆಸಿದರು ಎಂದು ವರದಿಯಾಗಿದೆ.
ಸಭೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ವಿಭಾಗದ ನಿರ್ದೇಶಕ ತಪನ್ ದೇಖಾ, ದಿಲ್ಲಿ ಪೊಲೀಸ್ ಆಯುಕ್ತ ಸತೀಶ್ ಗೊಲ್ಚಾ ಮತ್ತು ಎನ್ಐಎ ಪೊಲೀಸ್ ಮಹಾ ನಿರ್ದೇಶಕ ಸದಾನಂದ್ ವಸಂತ್ ದಾಟೆ ಪಾಲ್ಗೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ನಳಿನ್ ಪ್ರಭಾತ್ ಆನ್ ಲೈನ್ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಸ್ಫೋಟದ ಬಳಿಕದ ಪರಿಸ್ಥಿತಿಯ ಕುರಿತು ಅಧಿಕಾರಿಗಳು ವಿಸ್ತೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಂತರ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಘಟನೆಯ ಬಗ್ಗೆ ಉನ್ನತ ತನಿಖಾ ತಂಡಗಳು ತನಿಖೆ ನಡೆಸುತ್ತಿದ್ದು, ಪ್ರಕರಣದ ಆಳ-ಅಗಲಕ್ಕೆ ಇಳಿದು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸೋಮವಾರ ಸಂಜೆ ಕೆಂಪು ಕೋಟೆ ಬಳಿಯ ಮೆಟ್ರೊ ನಿಲ್ದಾಣದ ಸಮೀಪದ ಸಿಗ್ನಲ್ ಬಳಿ ನಿಧಾನವಾಗಿ ಸಂಚರಿಸುತ್ತಿದ್ದ ಕಾರೊಂದು ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ 13 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ.