ದಿಲ್ಲಿ ಸ್ಫೋಟ ಪ್ರಕರಣ | ರಸಗೊಬ್ಬರ ವ್ಯಾಪಾರಿ ಎನ್‌ಐಎ ವಶಕ್ಕೆ
ಸಾಂದರ್ಭಿಕ ಚಿತ್ರ
ಚಂಡಿಗಢ, ನ. 13: ದಿಲ್ಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟಕ್ಕೆ ಬಳಸಲಾದ ಪ್ರಮುಖ ವಸ್ತುವಾದ ಅಮೋನಿಯಂ ನೈಟ್ರೇಟ್ ಪೂರೈಸಿದ ಆರೋಪದಲ್ಲಿ ನೂಹ್ ಜಿಲ್ಲೆಯ ಪಿನಗಾಂವ್‌ನ ರಸಗೊಬ್ಬ ಹಾಗೂ ಬೀಜ ಮಾರಾಟ ಮಾಡುವ ಅಂಗಡಿಯ ಮಾಲಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ವಶಕ್ಕೆ ತೆಗೆದುಕೊಂಡಿದೆ.
ಶಂಕಿತನನ್ನು ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಪಿನಗಾಂವ್‌ನ ನಿವಾಸಿಯಾಗಿರುವ ಈತನನ್ನು ಡಬ್ಬು ಸಿಂಗ್ಲಾ ಎಂದು ಕರೆಯಲಾಗುತ್ತಿತ್ತು. ಈತನ ಅಂಗಡಿಯಿಂದ ಸುಮಾರು 300 ಕಿ.ಗ್ರಾಂ. ಅಮೋನಿಯಂ ನೈಟ್ರೇಟ್ ಖರೀದಿ ಬಗ್ಗೆ ಗುಪ್ತಚರ ಮಾಹಿತಿ ದೊರೆತಿದೆ. ಇದರ ಆಧಾರದಲ್ಲಿ ಎನ್‌ಐಎ ದಿನೇಶ್ ಕುಮಾರ್‌ನನ್ನು ಗುರುವಾರ ಬೆಳಗ್ಗೆ ಬಂಧಿಸಿದೆ.
ಈತ ಎರಡು ವರ್ಷಗಳಿಂದ ರಸಗೊಬ್ಬರ ವ್ಯವಹಾರ ನಡೆಸುತ್ತಿದ್ದ. ಖರೀದಿದಾರರ ಗುರುತು ಪರಿಶೀಲಿಸದೆ ಲಾಭಕ್ಕಾಗಿ ರಾಸಾಯನಿಕಗಳನ್ನು ಪೂರೈಕೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
‘‘ದಿನೇಶ್ ಕುಮಾರ್‌ನನ್ನು ಗುರುವಾರ ಬೆಳಗ್ಗೆ ಬಂಧಿಸಲಾಗಿದೆ. ಆತನ ವಿಚಾರಣೆ ನಡೆಯುತ್ತಿದೆ’’ ಎಂದು ಎನ್‌ಐಎಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ದಿನೇಶ್ ಕುಮಾರ್‌ನ ಬಂಧನದ ಸುದ್ದಿ ಸ್ಥಳೀಯ ಗೊಬ್ಬರ ಹಾಗೂ ಬೀಜ ಮಾರಾಟಗಾರರಲ್ಲಿ ಆತಂಕ ಉಂಟು ಮಾಡಿತು. ಹಲವರು ತಮ್ಮ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದರು. ‘‘ನಮಗೆ ಭಯವಾಗಿದೆ; ತನಿಖಾ ಸಂಸ್ಥೆ ಪ್ರತಿಯೊಬ್ಬರನ್ನೂ ಪ್ರಶ್ನಿಸುತ್ತಿದೆ’’ ಎಂದು ಪಿನಗಾಂವ್ ಸಮೀಪದ ಹೆಸರು ಹೇಳಲಿಚ್ಛಿಸಿದ ಅಂಗಡಿ ಮಾಲಕರೋರ್ವರು ತಿಳಿಸಿದ್ದಾರೆ.