ದಿಲ್ಲಿ ಕಾರ್ ಬಾಂಬ್ ಸ್ಫೋಟ ಪ್ರಕರಣ: ಮತ್ತೊಬ್ಬ ಪ್ರಮುಖ ಶಂಕಿತ ಸಂಚುಕೋರನನ್ನು ಬಂಧಿಸಿದ ಎನ್ಐಎ
Photo Credit : PTI
ಹೊಸ ದಿಲ್ಲಿ: ನವೆಂಬರ್ 10ರಂದು ಕೆಂಪು ಕೋಟೆಯ ಬಳಿ ಸಂಭವಿಸಿದ್ದ ಕಾರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಈ ಸ್ಫೋಟದಲ್ಲಿ 13 ಮಂದಿ ಮೃತಪಟ್ಟು, ಸುಮಾರು 30 ಮಂದಿ ಗಾಯಗೊಂಡಿದ್ದರು.
ಆರೋಪಿ ಜಸೀರ್ ಬಿಲಾಲ್ ವಾನಿ ಅಕ ಡ್ಯಾನಿಶ್ ನನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ಬಂಧಿಸಲಾಗಿದೆ. ಬಂಧಿತ ಆರೋಪಿಯು ಅನಂತನಾಗ್ ಜಿಲ್ಲೆಯ ಕಾಝಿಗುಂಡ್ ನಿವಾಸಿಯಾಗಿದ್ದಾನೆ. ಕಾರ್ ಬಾಂಬ್ ಸ್ಫೋಟಕ್ಕೂ ಮುನ್ನ, ಆತ ಡ್ರೋನ್ ಗಳನ್ನು ಮಾರ್ಪಡಿಸುವ ಮೂಲಕ ಹಾಗೂ ರಾಕೆಟ್ ಗಳನ್ನು ತಯಾರಿಸಲು ಪ್ರಯತ್ನಿಸುವ ಮೂಲಕ ತಾಂತ್ರಿಕ ನೆರವು ಒದಗಿಸಿದ್ದ ಎಂದು ಆರೋಪಿಸಲಾಗಿದೆ.
ಡ್ಯಾನಿಶ್ ಸಹ ಸಂಚುಕೋರನಾಗಿದ್ದು, ಕಾರ್ ಬಾಂಬ್ ದಾಳಿ ಯೋಜಿಸಲು ಶಂಕಿತ ಉಗ್ರಗಾಮಿ ಉಮರ್ ಉನ್ ನಬಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದ್ದ ಎಂದು ಸೋಮವಾರ ರಾಷ್ಟ್ರೀಯ ತನಿಖಾ ತಂಡ ಹೇಳಿದೆ.
ಇದಕ್ಕೂ ಮುನ್ನ, ಸ್ಫೋಟದಲ್ಲಿ ಭಾಗಿಯಾಗಿದ್ದ ಕಾರಿನ ನೋಂದಣಿ ಹೊಂದಿದ್ದ ಅಮೀರ್ ರಶೀದ್ ಅಲಿ ಎಂಬ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಆತ ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನ ಸಂಬೂರ ನಿವಾಸಿಯಾಗಿದ್ದು, ವೃತ್ತಿಯಲ್ಲಿ ವೈದ್ಯನಾಗಿದ್ದ ಶಂಕಿತ ಆರೋಪಿ ನಬಿಯೊಂದಿಗೆ ಕಾರ್ ಬಾಂಬ್ ಸ್ಫೋಟದ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ. ಸೋಮವಾರ ಆತನನ್ನು ನ್ಯಾಯಾಲಯದ ಮುಂದೆ ರಾಷ್ಟ್ರೀಯ ತನಿಖಾ ದಳ ಹಾಜರುಪಡಿಸಿತು. ಬಳಿಕ, ಆತನನ್ನು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ ವಶಕ್ಕೆ ಒಪ್ಪಿಸಲಾಯಿತು.