ವಾಟ್ಸ್ ಆ್ಯಪ್ ಚಾಟ್ ಗಳನ್ನು ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ: ದಿಲ್ಲಿ ನ್ಯಾಯಾಲಯ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ವಾಟ್ಸ್ ಆ್ಯಪ್ ಚಾಟ್ ಗಳನ್ನು "ಸಮರ್ಪಕ ಪುರಾವೆ" ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದಿಲ್ಲಿ ನ್ಯಾಯಾಲಯ ಮಂಗಳವಾರ ಹೇಳಿದೆ.
2020 ರ ಈಶಾನ್ಯ ದಿಲ್ಲಿ ಗಲಭೆಯ ಸಂದರ್ಭದಲ್ಲಿ ದಾಖಲಾಗಿದ್ದ ಐದು ಕೊಲೆ ಪ್ರಕರಣಗಳಲ್ಲಿ ನ್ಯಾಯಾಲಯವು ತೀರ್ಪು ನೀಡಿದೆ. ಈ ಚಾಟ್ ಗಳನ್ನು "ದೃಢೀಕರಣ ಸಾಕ್ಷ್ಯ"ವಾಗಿ ಬಳಸಬಹುದು ಎಂದು ಅದು ತೀರ್ಪು ನೀಡಿದೆ.
12 ಆರೋಪಿಗಳು ಸಾಮಾನ್ಯವಾಗಿರುವಂತಹ ಎಲ್ಲಾ ಐದು ಪ್ರಕರಣಗಳಲ್ಲಿ, ಪ್ರಾಸಿಕ್ಯೂಷನ್ ಸಾಕ್ಷ್ಯವಾಗಿ ವಾಟ್ಸ್ ಆ್ಯಪ್ ಚಾಟ್ ಗಳನ್ನು ಹೆಚ್ಚು ಅವಲಂಬಿಸಿತ್ತು.
ಗಲಭೆಯ ಒಂದು ವಾರದ ನಂತರ ಒಂಭತ್ತು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತು ದಾಖಲಾಗಿರುವ ಪುರುಷರ ಹತ್ಯೆಗೆ ಸಂಬಂಧಿಸಿದಂತೆ ಒಂಭತ್ತು ಪ್ರಕರಣಗಳಲ್ಲಿ ಇವು ಸೇರಿವೆ. ಉಳಿದ ನಾಲ್ಕು ಪ್ರಕರಣಗಳಲ್ಲಿ, ಒಂದು ಖುಲಾಸೆಯಾಗಿದೆ. ಮೂರು ಪ್ರಕರಣಗಳು, ಆರೋಪಿಗಳ ಅಂತಿಮ ವಾದಗಳು ಮತ್ತು ಹೇಳಿಕೆಗಳ ಹಂತದಲ್ಲಿವೆ.
ಗಲಭೆಯಲ್ಲಿ ಒಟ್ಟು 53 ಜನರು ಸಾವನ್ನಪ್ಪಿದ್ದು 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಎಲ್ಲಾ ಐದು ಪ್ರಕರಣಗಳಲ್ಲಿ, ದಿಲ್ಲಿ ಪೊಲೀಸರು ಪ್ರಾಥಮಿಕವಾಗಿ 'ಕಟ್ಟರ್ ಹಿಂದೂ ಏಕ್ತಾ' ಎಂಬ ವಾಟ್ಸಾಪ್ ಗ್ರೂಪ್ ಚಾಟ್ ಗಳನ್ನು ಅವಲಂಬಿಸಿದ್ದರು. ಪೊಲೀಸರು ಸಲ್ಲಿಸಿದ ಹಲವು ಆರೋಪಪಟ್ಟಿಗಳಲ್ಲಿ ಈ ವಾಟ್ಸಾಪ್ ಗ್ರೂಪ್ ಹೆಸರು ಕೂಡ ಇದೆ.
ಆರೋಪಪಟ್ಟಿಯ ಪ್ರಕಾರ, ಆರೋಪಿಗಳಲ್ಲಿ ಒಬ್ಬರಾದ ಲೋಕೇಶ್ ಸೋಲಂಕಿ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ, "ನಿಮ್ಮ ಸಹೋದರ 9 ಗಂಟೆಗೆ 2 ಮುಸ್ಲಿಂ ಪುರುಷರನ್ನು ಕೊಂದಿದ್ದಾನೆ” ಎಂದು ಬರೆದಿದ್ದ. ಸೋಲಂಕಿಯ ವಿಚಾರಣೆ ಬಳಿಕ ಇತರ ವ್ಯಕ್ತಿಗಳನ್ನು ಬಂಧಿಸಲಾಯಿತು. ಅಂತಿಮವಾಗಿ ಅವರೆಲ್ಲ ಒಂಭತ್ತು ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಆರೋಪಿಗಳನ್ನು ಖುಲಾಸೆಗೊಳಿಸಿದ ಕರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಖುಲಾಸೆಗೊಳಿಸಿದ್ದಾರೆ. ಆರೋಪಿಗಳನ್ನು ಖುಲಾಸೆಗೊಳಿಸುವಾಗ, ನ್ಯಾಯಾಲಯವು ವಿಶ್ವಾಸಾರ್ಹ ಸಾಕ್ಷಿಗಳ ಕೊರತೆಯನ್ನು ಸಹ ಸೂಚಿಸಿತು.
ಹಾಶಿಮ್ ಅಲಿ ಹತ್ಯೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದಲ್ಲಿ, ಎಪ್ರಿಲ್ 30 ರಂದು ನ್ಯಾಯಾಲಯವು ಯಾವುದೇ ಪ್ರತ್ಯಕ್ಷದರ್ಶಿಗಳು ಇಲ್ಲ ಎಂದು 12 ಆರೋಪಿಗಳನ್ನು ಖುಲಾಸೆಗೊಳಿಸಿತು.
ಮಾರ್ಚ್ 28 ರಂದು ಘೋಷಿಸಲಾದ ಮತ್ತೊಂದು ತೀರ್ಪಿನಲ್ಲಿ, ನ್ಯಾಯಾಲಯವು, ಒಬ್ಬ ಸಾಕ್ಷಿಯನ್ನು ಹೊರತುಪಡಿಸಿ ಎಲ್ಲರೂ ಪ್ರತಿಕೂಲ ಸಾಕ್ಷಿಯಾಗಿರುವುದನ್ನು ಗಮನಿಸಿತು.
ಭುರೆ ಅಲಿ ಹತ್ಯೆಗೆ ಸಂಬಂಧಿಸಿದಂತೆ ಮಾರ್ಚ್ 28 ರಂದು ನೀಡಲಾದ ಮತ್ತೊಂದು ತೀರ್ಪಿನಲ್ಲಿ, "ಭುರೆ ಮೇಲಿನ ಹಲ್ಲೆ ಮತ್ತು ಕೊಲೆಯ ಘಟನೆಯನ್ನು ನೋಡಿದ್ದೇವೆ ಎಂದು ಸಾಕ್ಷಿಗಳಲ್ಲಿ ಯಾರೂ ದೃಢಪಡಿಸಿಲ್ಲ" ಎಂದು ನ್ಯಾಯಾಲಯ ಗಮನಿಸಿದೆ.
ಮೇ 13 ರಂದು ನೀಡಿದ ತೀರ್ಪಿನಲ್ಲಿ, ನ್ಯಾ. ಪ್ರಮಾಚಲ ಅವರು ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಕೊಲೆ ಆರೋಪದಿಂದ ಖುಲಾಸೆಗೊಳಿಸಿದರು. ಆದರೆ ಸಾರ್ವಜನಿಕ ದುಷ್ಕೃತ್ಯವನ್ನು ಉಂಟುಮಾಡುವ ಮತ್ತು ದ್ವೇಷವನ್ನು ಉತ್ತೇಜಿಸುವ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಸೋಲಂಕಿ ಅವರನ್ನು ದೋಷಿ ಎಂದು ತೀರ್ಪು ನೀಡಿತು.
"ಆರೋಪಿ ಲೋಕೇಶ್ ಪೋಸ್ಟ್ ಮಾಡಿದ ಸಂದೇಶಗಳ ಉದ್ದೇಶವು ಇತರರನ್ನು ಮುಸ್ಲಿಂ ವ್ಯಕ್ತಿಗಳ ವಿರುದ್ಧ ಪ್ರಚೋದಿಸುವುದಾಗಿತ್ತು ಎಂಬುದು ಸ್ಪಷ್ಟವಾಗಿದೆ. ಈ ಕೃತ್ಯವು ವಾಸ್ತವವಾಗಿ ಮುಸ್ಲಿಂ ವ್ಯಕ್ತಿಗಳ ಬಗ್ಗೆ ದ್ವೇಷವನ್ನು ಹರಡುವ ಮತ್ತು ಅವರ ವಿರುದ್ಧ ಹಿಂಸಾಚಾರವನ್ನು ಮಾಡಲು ಇತರರನ್ನು ಪ್ರಚೋದಿಸುವಂತಿತ್ತು" ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಆದೇಶಗಳ ಪ್ರಕಾರ, ಫೆಬ್ರವರಿ 2020 ರಿಂದ ಫೆಬ್ರವರಿ 2025 ರವರೆಗೆ ಈಶಾನ್ಯ ದಿಲ್ಲಿ ಪೊಲೀಸರು ದಾಖಲಿಸಿದ ಗಲಭೆ, ದೊಂಭಿ ಮತ್ತು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ 700 ಎಫ್‌ಐಆರ್‌ಗಳಲ್ಲಿ 109 ತೀರ್ಪುಗಳನ್ನು ನೀಡಲಾಗಿದೆ. 90 ಪ್ರಕರಣಗಳಲ್ಲಿ (82%) ಖುಲಾಸೆಗೊಂಡಿದ್ದರೆ, 19 ಪ್ರಕರಣಗಳಲ್ಲಿ (18%) ಶಿಕ್ಷೆ ವಿಧಿಸಲಾಗಿದೆ. 90 (57%) ಖುಲಾಸೆಗೊಂಡ ಪ್ರಕರಣಗಳ ಪೈಕಿ 51 ಪ್ರಕರಣಗಳಲ್ಲಿ, ಸಾಕ್ಷಿಗಳು ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಾರೆ.