×
Ad

ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಜಾಲವನ್ನು ಭೇದಿಸಿದ ದಿಲ್ಲಿ ಪೊಲೀಸರು: ಮೂವರ ಬಂಧನ

Update: 2025-12-01 18:12 IST

Photo Credit : ANI 

ಹೊಸದಿಲ್ಲಿ : ದಿಲ್ಲಿ ಪೊಲೀಸ್‌ನ ವಿಶೇಷ ಘಟಕವು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಜಾಲವೊಂದನ್ನು ಭೇದಿಸಿದೆ. ಪ್ರಸ್ತುತ ನೆರೆಯ ದೇಶದಲ್ಲಿ ನೆಲೆಸಿರುವ ಗ್ಯಾಂಗ್‌ಸ್ಟರ್ ಪರಿವರ್ತಿತ ಭಯೋತ್ಪಾದಕ ಶಹಜಾದ್ ಭಟ್ಟಿ ಈ ಜಾಲದ ನಾಯಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಪಂಜಾಬ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಿಂದ ಈ ಜಾಲದ ಮೂವರು ಪ್ರಮುಖ ಸದಸ್ಯರನ್ನು ಬಂಧಿಸಿದ್ದು, ಸೆಮಿ ಆಟೊಮ್ಯಾಟಿಕ್ ಪಿಸ್ತೂಲು, 10 ಸಜೀವ ಗುಂಡುಗಳು, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸಿಪಿ ಪ್ರಮೋದ ಸಿಂಗ್ ಕುಶ್ವಾಹ್ ರವಿವಾರ ಸುದ್ದಿಗಾರರಿಗೆ ತಿಳಿಸಿದರು.

ನ.25ರಂದು ಪಂಜಾಬಿನ ಗುರುದಾಸಪುರದಲ್ಲಿ ನಗರ ಪೋಲಿಸ್ ಠಾಣೆಯ ಹೊರಗೆ ನಡೆದಿದ್ದ ಗ್ರೆನೇಡ್ ದಾಳಿಯಲ್ಲಿ ಈ ಜಾಲವು ಭಾಗಿಯಾಗಿದ್ದು, ಭಟ್ಟಿಯ ಸೂಚನೆಯ ಮೇರೆಗೆ ಈ ದಾಳಿಯನ್ನು ನಡೆಸಲಾಗಿತ್ತು. ಭಟ್ಟಿ ಪಾಕಿಸ್ತಾನದಿಂದ ಎನ್‌ಕ್ರಿಪ್ಟ್ ಮಾಡಲಾದ ಪ್ಲ್ಯಾಟ್‌ಫಾರಂಗಳು ಮತ್ತು ಸಾಮಾಜಿಕ ಮಾಧ್ಯಮ ಚಾನೆಲ್‌ಗಳನ್ನು ಬಳಸಿಕೊಂಡು ಕಾರ್ಯಾಚರಣೆಗಳನ್ನು ಸಂಘಟಿಸುತ್ತಿದ್ದಾನೆ ಎಂದರು.

ಮಧ್ಯಪ್ರದೇಶದ ದಾಟಿಯಾ ನಿವಾಸಿ ವಿಕಾಸ ಪ್ರಜಾಪತಿ ಅಲಿಯಾಸ ಬೇತು(19), ಪಂಜಾಬಿನ ಫಿರೋಜ್‌ಪುರ ನಿವಾಸಿ ಹರ್ಗುಣಪ್ರೀತ್ ಸಿಂಗ್ ಅಲಿಯಾಸ್ ಗುರುಕರಣಪ್ರೀತ್ ಸಿಂಗ್ (19) ಮತ್ತು ಉತ್ತರ ಪ್ರದೇಶದ ಬಿಜ್ನೌರ್‌ನ ಆರಿಷ್(22) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಕುಶ್ವಾಹ್ ತಿಳಿಸಿದರು.

ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ಬೇಕಾಗಿದ್ದ ಪ್ರಜಾಪತಿ ಸಾಮಾಜಿಕ ಮಾಧ್ಯಮಗಳಲ್ಲಿ ಭಟ್ಟಿ ಜೊತೆ ಆಗಾಗ ಸಂಪರ್ಕದಲ್ಲಿರುತ್ತಿದ್ದ. ಆತ ಗುರುದಾಸಪುರ ಮತ್ತು ದಿಲ್ಲಿ ನಡುವೆ ತನ್ನ ನೆಲೆಯನ್ನು ಬದಲಿಸುತ್ತಿದ್ದ. ಜಾಡನ್ನು ಪತ್ತೆ ಹಚ್ಚುವುದನ್ನು ತಪ್ಪಿಸಲು ತನ್ನ ಸೆಲ್ ಪೋನ್ ಸ್ವಿಚ್ ಆಫ್ ಮಾಡುವಂತೆ ಭಟ್ಟಿ ಆತನಿಗೆ ಆಗಾಗ್ಗೆ ಸೂಚಿಸುತ್ತಿದ್ದ ಎಂದರು.

ಎರಡು ದಿನಗಳ ಶೋಧ ಕಾರ್ಯಾಚರಣೆಯ ಬಳಿಕ ಪ್ರಜಾಪತಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ವಿಚಾರಣೆಯಲ್ಲಿ ಆತ ಜಾಲದ ಕಾರ್ಯತಂತ್ರವನ್ನು ಬಹಿರಂಗಗೊಳಿಸಿದ್ದಾನೆ. ಭಟ್ಟಿ ಮತ್ತು ಪಾಕಿಸ್ತಾನ ಮೂಲದ ಆತನ ಸಹಚರರು ಸಾಮಾಜಿಕ ಮಾಧ್ಯಮಗಳಲ್ಲಿ ಯುವ ಭಾರತೀಯರನ್ನು ಗುರಿಯಾಗಿಸಿಕೊಂಡು ಅವರಿಗೆ ಹಣದ ಮತ್ತು ಗ್ಯಾಂಗ್‌ಸ್ಟರ್‌ಗಳಾಗಿ ವೈಭವದ ಜೀವನದ ಆಮಿಷವನ್ನೊಡ್ಡುತ್ತಿದ್ದರು ಎಂದರು.

ಭಟ್ಟಿಯ ಆನ್‌ಲೈನ್ ವ್ಯಕ್ತಿತ್ವದಿಂದ ಪ್ರಭಾವಿತನಾಗಿ ತಾನು ಸಾಮಾಜಿಕ ಮಾಧ್ಯಮದ ಮೂಲಕ ಆತನನ್ನು ಸಂಪರ್ಕಿಸಿದ್ದಾಗಿ ಪ್ರಜಾಪತಿ ಪೊಲೀಸರಿಗೆ ತಿಳಿಸಿದ್ದಾನೆ.

ಭಟ್ಟಿ ಪ್ರಜಾಪತಿಗೆ ಗ್ರೆನೇಡ್ ಇದ್ದ ಪಾರ್ಸಲ್ ಕಳುಹಿಸಿದ್ದ. ಭಟ್ಟಿಯ ಸೂಚನೆಯ ಮೇರೆಗೆ ಗುರುದಾಸಪುರ ಪೊಲೀಸ್ ಠಾಣೆಯ ಪರಿಸರದ ಸಮೀಕ್ಷೆ ನಡೆಸಿದ್ದ ಪ್ರಜಾಪತಿ ಗ್ರೆನೇಡ್‌ನ್ನು ಹರ್ಗುಣಪ್ರೀತ ಸಿಂಗ್ ಮತ್ತು ಆತನ ಸಹಚರನಿಗೆ ಹಸ್ತಾಂತರಿಸಿದ್ದ.

ನ.25ರಂದು ಪೋಲಿಸ್ ಠಾಣೆಯ ಹೊರಗೆ ಗ್ರೆನೇಡ್ ದಾಳಿಯನ್ನು ತಾನೇ ನಡೆಸಿದ್ದಾಗಿ ಹರ್ಗುಣಪ್ರೀತ್ ಸಿಂಗ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಈ ವೇಳೆ ತನ್ನ ಸಹಚರ ಬೈಕ್ ಸವಾರಿ ಮಾಡುತ್ತಿದ್ದು, ತಾನು ಹಿಂದಿನ ಸೀಟಿನಲ್ಲಿದ್ದೆ ಎಂದು ಆತ ಹೇಳಿದ್ದಾನೆ.

ಮೂರನೇ ಆರೋಪಿ ಆಸಿಫ್‌ನನ್ನೂ ಸಾಮಾಜಿಕ ಮಾಧ್ಯಮದ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು ಮತ್ತು ಪಂಜಾಬ್‌ನಲ್ಲಿ ಇದೇ ರೀತಿಯ ಗ್ರೆನೇಡ್ ದಾಳಿಗಳಿಗೆ ಸಿದ್ಧವಾಗಿರುವಂತೆ ಆತನಿಗೆ ಸೂಚಿಸಲಾಗಿತ್ತು. ಇದಕ್ಕಾಗಿ ಭಟ್ಟಿ ಸ್ಥಳದ ನಕ್ಷೆಗಳು ಮತ್ತು ಚಿತ್ರಗಳನ್ನು ಆತನೊಂದಿಗೆ ಹಂಚಿಕೊಂಡಿದ್ದ ಎಂದು ಕುಶ್ವಾಹ್ ತಿಳಿಸಿದರು.

ಪೊಲೀಸರು ಜಾಲದ ಇತರ ಸದಸ್ಯರನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News