×
Ad

ದಿಲ್ಲಿ ಸ್ಫೋಟ ಪ್ರಕರಣ | ಮೃತಪಟ್ಟವರಲ್ಲಿ ಟ್ಯಾಕ್ಸಿ ಚಾಲಕ, ಅಂಗಡಿ ಮಾಲಕ

Update: 2025-11-11 20:27 IST

 Photo Credit: ANI

ಹೊಸದಿಲ್ಲಿ, ನ. 11: ದಿಲ್ಲಿಯ ಕೆಂಪು ಕೋಟೆಯ ಸಮೀಪ ಸೋಮವಾರ ಸಂಭವಿಸಿರುವ ಸ್ಫೋಟದಲ್ಲಿ 12 ಜನರು ಮೃತಪಟ್ಟಿದ್ದು, ಅವರಲ್ಲಿ ಕೆಲವರ ಗುರುತು ಪತ್ತೆಯಾಗಿದೆ.

ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ 18 ವರ್ಷದ ನುಮಾನ್ ಅನ್ಸಾರಿ ತನ್ನ ಅಂಗಡಿಗೆ ಬೇಕಾದ ಸೌಂದರ್ಯ ವರ್ಧಕಗಳನ್ನು ಖರೀದಿಸಲು ದಿಲ್ಲಿಗೆ ಆಗಮಿಸಿದ್ದರು. ಅವರು ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

ಶಾಮ್ಲಿಯ ಝಿಂಝಾನ ಪಟ್ಟಣದವರಾದ ಅನ್ಸಾರಿ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು. ‘‘ನುಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸೋದರ ಸಂಬಂಧಿ ಗಾಯಗೊಂಡಿದ್ದಾರೆ ಹಾಗೂ ದಿಲ್ಲಿಯ ಲೋಕನಾಯಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’’ ಎಂದು ನುಮಾನ್ ನ ಮಾವ ಫುರ್ಕಾನ್ ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಡಿಟಿಸಿಯ ನಿರ್ವಾಹಕ ಅಶೋಕ್ ಕುಮಾರ್ (34) ಅಮೋರಾ ಜಿಲ್ಲೆಯವರು. ಮೃತಪಟ್ಟ ಇನ್ನೋರ್ವರನ್ನು ಪಂಕಜ್ ಸಹಾನಿ (22) ಎಂದು ಗುರುತಿಸಲಾಗಿದೆ. ಅವರು ಟ್ಯಾಕ್ಸಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

12 ಮಂದಿ ಸಾವನ್ನಪ್ಪಲು ಕಾರಣವಾದ ಸೋಮವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ತನ್ನ ಸೋದರಳಿಯ ಸಾವನ್ನಪ್ಪಿರುವ ಕುರಿತು ದಿಲ್ಲಿಯ ಕೊಟ್ವಾಲಿ ಪೊಲೀಸ್ ಠಾಣೆಯಿಂದ ಫೋನ್ ಕರೆ ಸ್ವೀಕರಿಸಲಾಗಿತ್ತು ಎಂದು ಪಂಕಜ್ ಸಹಾನಿಯ ಸಂಬಂಧಿ ರಾಮ್ದೇವ್ ಸಹಾನಿ ತಿಳಿಸಿದ್ದಾರೆ.

‘‘ಪಂಕಜ್ ಸಹಾನಿ ಮೂರು ವರ್ಷಗಳಿಂದ ಟ್ಯಾಕ್ಸಿ ಚಲಾಯಿಸುತ್ತಿದ್ದರು. ಸ್ಫೋಟದ ತೀವ್ರತೆಗೆ ಅವರ ತಲೆಯ ಹಿಂಭಾಗ ಹಾರಿ ಹೋಗಿದೆ. ಅವರ ವೇಗನರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ನಮಗೆ ತಿಳಿಸಿದ್ದಾರೆ’’ ಎಂದು ಸಹಾನಿ ಹೇಳಿದ್ದಾರೆ.

ಮಂಗಳವಾರ ಮತ್ತೆ ಮೂವರು ಸಾವನ್ನಪ್ಪುವುದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News