×
Ad

Delhi ಗಲಭೆ ಪ್ರಕರಣ: ಸುಪ್ರೀಂ ಕೋರ್ಟ್ ಜಾಮೀನಿನ ಬಳಿಕ ಗುಲ್ಫಿಶಾ ಫಾತಿಮಾ ಜೈಲಿನಿಂದ ಬಿಡುಗಡೆ

Update: 2026-01-07 23:21 IST

ಗುಲ್ಫಿಶಾ ಫಾತಿಮಾ | Photo Credit : PTI  

ಹೊಸದಿಲ್ಲಿ: 2020ರ ಈಶಾನ್ಯ ದಿಲ್ಲಿ ಗಲಭೆ ಪಿತೂರಿ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಗುಲ್ಫಿಶಾ ಫಾತಿಮಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಗೊಂಡರು. ಕೋರ್ಟ್ ವಿಧಿಸಿದ ಎಲ್ಲಾ ಜಾಮೀನು ಷರತ್ತುಗಳು ಪಾಲನೆಯಾಗಿವೆ ಎಂದು ವಿಚಾರಣಾ ನ್ಯಾಯಾಲಯ ದೃಢಪಡಿಸಿದ ಬಳಿಕ ಬಿಡುಗಡೆ ಆದೇಶ ಜಾರಿಗೊಂಡಿತು ಎಂದು ಜೈಲು ಮೂಲಗಳು ತಿಳಿಸಿವೆ.

ಜೈಲಿನಿಂದ ಹೊರಬಂದ ಬಳಿಕ ಫಾತಿಮಾ ಅವರು ತಮ್ಮ ತಾಯಿಯನ್ನು ಭೇಟಿಯಾದರು. ಜಾಮೀನು ಪಡೆದ ಐದು ಆರೋಪಿಗಳ ಪೈಕಿ ನಾಲ್ವರು ತಲಾ 2 ಲಕ್ಷ ಮೊತ್ತದ ಜಾಮೀನು ಬಾಂಡ್ ಹಾಗೂ ಇಬ್ಬರು ಸ್ಥಳೀಯ ಶ್ಯೂರಿಟಿಗಳನ್ನು ಸಲ್ಲಿಸಿದ ನಂತರ ಅವರಿಗೆ ಬಿಡುಗಡೆ ಆದೇಶ ನೀಡಲಾಗಿದೆ. ಐದನೇ ಆರೋಪಿಗೆ ಸೋಮವಾರ ಜಾಮೀನು ದೊರೆತಿದ್ದರೂ, ಜಾಮೀನು ಬಾಂಡ್ ಸಲ್ಲಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ಬಿಡುಗಡೆ ಆಗಿಲ್ಲ. ಅಗತ್ಯ ಔಪಚಾರಿಕತೆಗಳು ಮುಗಿದ ಬಳಿಕ ಉಳಿದ ಆರೋಪಿಗಳ ಬಿಡುಗಡೆಯೂ ನಡೆಯುವ ನಿರೀಕ್ಷೆಯಿದೆ.

ಶ್ಯೂರಿಟಿಗಳು ಮತ್ತು ಸಂಬಂಧಿತ ದಾಖಲೆಗಳ ಪರಿಶೀಲನಾ ವರದಿಗಳನ್ನು ದಿಲ್ಲಿ ಪೊಲೀಸರು ಸಲ್ಲಿಸಿದ ಬಳಿಕ, ಎಲ್ಲಾ ಷರತ್ತುಗಳು ಪಾಲನೆಯಾಗಿವೆ ಎಂದು ಗಮನಿಸಿ ವಿಚಾರಣಾ ನ್ಯಾಯಾಲಯವು ಬಿಡುಗಡೆ ಆದೇಶ ನೀಡಿದೆ.

ಪ್ರಕರಣದ ವಿಚಾರಣೆ ವೇಳೆ, ಉಮರ್ ಖಾಲಿದ್ ಹಾಗೂ ಶರ್ಜೀಲ್ ಇಮಾಮ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಾಥಮಿಕವಾಗಿ ಪ್ರಕರಣ ದಾಖಲಾಗಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿ ಅವರಿಗೆ ಜಾಮೀನು ನಿರಾಕರಿಸಿದೆ. ಆದರೆ, ಆರೋಪಿತ ಪಿತೂರಿಯಲ್ಲಿ ಭಾಗವಹಿಸಿರುವ ಮಟ್ಟವನ್ನು ಪರಿಗಣಿಸಿ ಐವರಿಗೆ ಜಾಮೀನು ನೀಡಲಾಗಿದೆ.

ಜಾಮೀನು ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದು, 11 ಷರತ್ತುಗಳನ್ನು ವಿಧಿಸಿದೆ. ಸ್ವಾತಂತ್ರ್ಯದ ದುರುಪಯೋಗ ನಡೆದರೆ ಜಾಮೀನು ರದ್ದುಗೊಳ್ಳಲಿದೆ ಎಂದು ಕೋರ್ಟ್ ಎಚ್ಚರಿಸಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ಪ್ರಸ್ತಾವಿತ ರಾಷ್ಟ್ರೀಯ ನಾಗರಿಕರ ನೋಂದಣಿ ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ 2020ರ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಗಲಭೆಗಳು ಭುಗಿಲೆದ್ದಿದ್ದು, 53 ಮಂದಿ ಮೃತಪಟ್ಟಿದ್ದರು ಮತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News