×
Ad

Delhi | ಮದುವೆ ಮೆರವಣಿಗೆಯಲ್ಲಿ ಗಲಾಟೆ; 17 ವರ್ಷದ ಬಾಲಕನನ್ನು ಗುಂಡಿಕ್ಕಿ ಹತ್ಯೆಗೈದ CISF ಹೆಡ್ ಕಾನ್‌ಸ್ಟೇಬಲ್

Update: 2025-12-03 12:53 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಶಹದಾರಾದ ಮಾನಸ ಸರೋವರ ಉದ್ಯಾನವನದ ಬಳಿ ಶನಿವಾರ ಸಂಜೆ ನಡೆದ ಮದುವೆ ಮೆರವಣಿಗೆಯ ಸಂಭ್ರಮ ಕ್ಷಣಾರ್ಧದಲ್ಲಿ ದುರಂತಕ್ಕೆ ತಿರುಗಿದ ಘಟನೆ ದಿಲ್ಲಿಯಲ್ಲಿ ನಡೆದಿದೆ. ಬರಾತ್‌ನಲ್ಲಿ ಹಣ ಸುರಿಯುವ ವೇಳೆ ಉಂಟಾದ ಸಣ್ಣ ಗಲಾಟೆ 17 ವರ್ಷದ ಜಾರ್ಖಂಡ್ ಮೂಲದ ಬಾಲಕನ ಸಾವಿಗೆ ಕಾರಣವಾಗಿದ್ದು, ಈ ಸಂಬಂಧ CISF ಹೆಡ್ ಕಾನ್‌ಸ್ಟೇಬಲ್ ಒಬ್ಬನನ್ನು ಪೊಲೀಸರ ಬಂಧಿಸಿದ್ದಾರೆ.

ಗುಂಡು ಹಾರಿಸಿದ ಆರೋಪಿಯನ್ನು ಮದನ್ ಗೋಪಾಲ್ ತಿವಾರಿ ಎಂದು ಗುರುತಿಸಲಾಗಿದೆ. ಕಾನ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆತ, ತಮ್ಮ ಸೋದರ ಸಂಬಂಧಿಯ ಮದುವೆಗೆ ರಜೆ ಪಡೆದು ದಿಲ್ಲಿಗೆ ಆಗಮಿಸಿದ್ದ ಎಂದು ತಿಳಿದು ಬಂದಿದೆ. ಘಟನೆಯ ನಂತರ ತಿವಾರಿ ತನ್ನ ಊರಾದ ಇಟಾವಾಗೆ ಪರಾರಿಯಾಗಿದ್ದು, ಅಲ್ಲಿಂದ ಆರೋಪಿಯನ್ನು ಬಂಧಿಸಲಾಗಿದೆ.

ಮದುವೆಯ ಮೆರವಣಿಗೆಯಲ್ಲಿ ವರ ಕುದುರೆಯ ಮೇಲೆ ಕುಳಿತು ಬಾರಾತ್ ಮೆರವಣಿಗೆಯಲ್ಲಿ ಸಾಗುತ್ತಿದ್ದಂತೆ ಕುಟುಂಬದವರು ಸಂಭ್ರಮಿಸುತ್ತಿದ್ದರು. ಅದೇ ವೇಳೆ ಕೆಲ ಮಕ್ಕಳು ಮೆರವಣಿಗೆಯೊಳಗೆ ನುಗ್ಗಲು ಪ್ರಯತ್ನಿಸಿದ್ದು, ಸಂಬಂಧಿಕರ ವಿರೋಧಕ್ಕೆ ಗುರಿಯಾಯಿತು. ಪಕ್ಕಕ್ಕೆ ಸರಿಯಲು ಸೂಚನೆ ನೀಡಿದರೂ ಮಕ್ಕಳು ತಕರಾರು ತೋರಿದ ಹಿನ್ನೆಲೆಯಲ್ಲಿ ವಾಗ್ವಾದ ಉಂಟಾಗಿ ಅದು ಜಗಳಕ್ಕೆ ತಿರುಗಿತು. ಈ ಗಲಾಟೆಯ ಮಧ್ಯದಲ್ಲೇ CISF ಹೆಡ್ ಕಾನ್‌ಸ್ಟೇಬಲ್ ಗೋಪಾಲ್ ತಿವಾರಿ ಕೋಪದಿಂದ ಗುಂಡು ಹಾರಿಸಿದ್ದು, ಬಾಲಕ ಕುಸಿದು ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಡಿಡಿಎ ಮಾರುಕಟ್ಟೆ ಸಮುದಾಯ ಕೇಂದ್ರದ ಬಳಿ ಈ ಘಟನೆ ನಡೆದಿದೆ. ಬಾಲಕನಿಗೆ ಗುಂಡೇಟು ತಗುಲಿರುವುದನ್ನು ಗಮನಿಸಿದ ದಾರಿಹೋಕರೊಬ್ಬರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆಯೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಅಂಗಡಿಯಿಂದ ಮನೆಗೆ ಬರುತ್ತಿದ್ದ ನನ್ನ ಪುತ್ರ ಮದುವೆ ಬರಾತ್ ನೋಡಲು ನಿಂತಿದ್ದ. ಈ ವೇಳೆ ಅಲ್ಲಿ ಸುರಿಯುತ್ತಿದ್ದ ಹಣವನ್ನು ಪುತ್ರ ಎತ್ತುತ್ತಿದ್ದ. ಇದು ಕೆಲವರಿಗೆ ಇಷ್ಟವಾಗದೆ ಮೊದಲು ಹಲ್ಲೆ ನಡೆಸಿದ್ದಾರೆ. ನಂತರ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ನೇರವಾಗಿ ಗುಂಡು ಹಾರಿಸಿದ್ದಾನೆ,” ಎಂದು ಬಾಲಕನ ತಂದೆ ಆರೋಪಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಬಾಲಕನ ಸಹೋದರ ಮನೆಗೆ ಓಡಿ ಕುಟುಂಬಕ್ಕೆ ವಿಷಯ ತಿಳಿಸಿದ್ದಾನೆ. ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಹತ್ಯೆ ಸೇರಿದಂತೆ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News