×
Ad

Delhi| ತುರ್ಕಮನ್ ಗೇಟ್‌ ಬಳಿ ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ: ಐವರ ಬಂಧನ

Update: 2026-01-07 15:12 IST

Photo: PTI

ಹೊಸದಿಲ್ಲಿ: ಹಳೆಯ ದಿಲ್ಲಿಯ ತುರ್ಕಮನ್ ಗೇಟ್ ಪ್ರದೇಶದಲ್ಲಿನ ಮಸೀದಿ ಬಳಿ ನ್ಯಾಯಾಲಯದ ಆದೇಶದಂತೆ ನಡೆಯುತ್ತಿದ್ದ ಅತಿಕ್ರಮಣ ವಿರೋಧಿ ತೆರವು ಕಾರ್ಯಾಚರಣೆಯ ವೇಳೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಬುಧವಾರ ಐವರನ್ನು ಬಂಧಿಸಿದ್ದಾರೆ. ಪ್ರಕರಣದ ಹಿಂದೆ ದೊಡ್ಡ ಪಿತೂರಿ ಇದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಸಮಾಜವಾದಿ ಪಕ್ಷದ ಸಂಸದ ಮೊಹಿಬುಲ್ಲಾ ನದ್ವಿ ಸ್ಥಳದಲ್ಲಿದ್ದು ಜನಸಮೂಹವನ್ನು ಪ್ರಚೋದಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. “ಇದುವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಿತೂರಿಯ ಬಗ್ಗೆ ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ,” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಮಧುರ್ ವರ್ಮಾ ಹೇಳಿದ್ದಾರೆ.

ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸೈಯದ್ ಫೈಝ್ ಇಲಾಹಿ ಮಸೀದಿ ಹಾಗೂ ಹತ್ತಿರದ ಸ್ಮಶಾನದ ಪಕ್ಕದ ಭೂಮಿಯಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕೆಲವರು ಪೊಲೀಸರ ಮೇಲೆ ಕಲ್ಲುಗಳು ಮತ್ತು ಗಾಜಿನ ಬಾಟಲಿಗಳನ್ನು ಎಸೆದಿದ್ದಾರೆ. ಈ ಘಟನೆಯಲ್ಲಿ ಐವರು ಪೊಲೀಸರಿಗೆ ಗಾಯಗಳಾಗಿವೆ.

ಘಟನೆಗೆ ಸಂಬಂಧಿಸಿ ವದಂತಿಗಳನ್ನು ಹರಡುವ ಹಾಗೂ ಜನರನ್ನು ಪ್ರಚೋದಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ವೀಡಿಯೊಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಂಡಿರುವುದರಿಂದ ದಿಲ್ಲಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News