×
Ad

ದಿಲ್ಲಿ | ಪತ್ರಕರ್ತೆಯನ್ನು ಬೆನ್ನಟ್ಟಿ ಕಾರಿನ ಮೇಲೆ ದಾಳಿ : ಇಬ್ಬರು ಆರೋಪಿಗಳ ಬಂಧನ

Update: 2025-11-01 12:07 IST

Photo credit: NDTV

ಹೊಸದಿಲ್ಲಿ: ನೋಯ್ಡಾದಿಂದ ದಕ್ಷಿಣ ದಿಲ್ಲಿಗೆ ತೆರಳುತ್ತಿದ್ದ ಪತ್ರಕರ್ತೆಯನ್ನು ಬೆನ್ನಟ್ಟಿ ಎಕ್ಸ್‌ಪ್ರೆಸ್‌ ವೇಯಲ್ಲಿ ಕಾರಿನ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ ಅಕ್ಟೋಬರ್ 30ರ ಮಧ್ಯರಾತ್ರಿ ನೋಯ್ಡಾದ ಕಚೇರಿಯಿಂದ ವಸಂತ್ ಕುಂಜ್‌ನಲ್ಲಿರುವ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ರಾತ್ರಿ 12.45ರ ಸುಮಾರಿಗೆ ಘಟನೆ ನಡೆದಿದೆ.

"ನಾನು ಮಹಾಮಾಯ ಫ್ಲೈಓವರ್‌ನಲ್ಲಿ ಸಾಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾರನ್ನು ನಿಲ್ಲಿಸುವಂತೆ ನನಗೆ ಸನ್ನೆ ಮಾಡಿದರು. ಆರಂಭದಲ್ಲಿ ಅವರನ್ನು ನಿರ್ಲಕ್ಷಿಸಿದೆ. ಆದರೆ ಅವರು ನನ್ನನ್ನು ಬೆನ್ನಟ್ಟುತ್ತಲೇ ಇದ್ದರು. ಬಳಿಕ ಹಿಂಬದಿ ಸವಾರ ನನ್ನ ವಿಂಡ್‌ಸ್ಕ್ರೀನ್‌ಗೆ ಬಡಿದು ಬಾಗಿಲು ತೆರೆಯಲು ಪ್ರಯತ್ನಿಸಿದ. ಅದು ಸಾಧ್ಯವಾಗದಿದ್ದಾಗ ಆತ ಕೋಲನ್ನು ತೆಗೆದುಕೊಂಡು ಕಾರಿನ ಹಿಂಭಾಗದ ಗಾಜನ್ನು ಪುಡಿ ಮಾಡಿದ್ದಾನೆ ಎಂದು ಪತ್ರಕರ್ತೆ ಆರೋಪಿಸಿದ್ದಾರೆ.

ಭಯಭೀತಳಾದ ನಾನು ಸಹೋದ್ಯೋಗಿ ಒಬ್ಬರಿಗೆ ಕರೆ ಮಾಡಿದೆ. ಅವರು ವಾಹನ ನಿಲ್ಲಿಸಬೇಡಿ ಎಂದು ಸಲಹೆ ನೀಡಿದರು. ಲಜಪತ್ ನಗರದ ಕಡೆಗೆ ಆಶ್ರಮ ಫ್ಲೈಓವರ್ ಬಳಿ ತಲುಪುವವರೆಗೂ ವೇಗವಾಗಿ ಕಾರು ಚಾಲನೆ ಮಾಡಿದೆ. ಬಳಿಕ ಟ್ಯಾಕ್ಸಿ ಚಾಲಕರ ಸಹಾಯ ಪಡೆದು ತಡರಾತ್ರಿ 1:30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ (PCR) ಕರೆ ಮಾಡಿದೆ ಎಂದು ಹೇಳಿದ್ದಾರೆ.

ಸನ್ ಲೈಟ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಅಪರಾಧಿಗಳ ಪತ್ತೆಗೆ ತಂಡವನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಶುಭಂ ಮತ್ತು ದೀಪಕ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News