ದಿಲ್ಲಿಯಲ್ಲಿ ಮೋಡ ಬಿತ್ತನೆ ಬಳಿಕವೂ ಮಳೆ ಸುರಿಯಲಿಲ್ಲ; 3.2 ಕೋಟಿ ರೂ.ಗಳ ಪ್ರಯೋಗ ವಿಫಲಗೊಂಡಿದ್ದೇಕೆ?
Photo Credit ; PTI
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ವಿಷಕಾರಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ದಿಲ್ಲಿ ಸರಕಾರವು ಮಂಗಳವಾರ ನಡೆಸಿದ್ದ ಮೋಡ ಬಿತ್ತನೆ ಪ್ರಯೋಗಗಳನ್ನು‘ಅತ್ಯಂತ ವೆಚ್ಚದಾಯಕ, ತಾತ್ಕಾಲಿಕ ಮತ್ತು ಅಸ್ಥಿರ’ ಎಂದು ತಜ್ಞರು ಬಣ್ಣಿಸಿದ್ದಾರೆ. ಕೃತಕ ಮಳೆಯು ಮಾಲಿನ್ಯಕಾರಕಗಳನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿದರೂ ವಾಯು ಮಾಲಿನ್ಯವು ಒಂದೆರಡು ದಿನಗಳಲ್ಲಿ ಮತ್ತೆ ಹೆಚ್ಚುತ್ತದೆ ಎಂದು ಅವರು ಹೇಳಿದ್ದಾರೆ.
ದಿಲ್ಲಿ ಪರಿಸರ ಇಲಾಖೆ ಮತ್ತು ಐಐಟಿ-ಕಾನ್ಪುರ ನಡುವಿನ ಒಡಂಬಡಿಕೆಯಂತೆ ಮೋಡ ಬಿತ್ತನೆಗಾಗಿ ಐದು ಪ್ರಯೋಗಗಳಿಗಾಗಿ 3.2 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ನಿಗದಿಗೊಳಿಸಲಾಗಿದೆ, ಅಂದರೆ ಒಂದು ಸಲ ಪ್ರಯೋಗಕ್ಕೆ 64 ಲಕ್ಷ ರೂ.ವೆಚ್ಚವಾಗುತ್ತದೆ. ಉತ್ತರ ದಿಲ್ಲಿಯಲ್ಲಿ ಮೂರು ಪ್ರಯೋಗಗಳನ್ನು ನಡೆಸಲಾಗಿದ್ದರೂ ಯಾವುದೂ ದೊಡ್ಡ ಪ್ರಮಾಣದಲ್ಲಿ ಮಳೆಯನ್ನು ಸುರಿಸಿಲ್ಲ. ಕಳೆದ ಕೆಲವು ದಿನಗಳಿಂದ ದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕವು(ಎಕ್ಯೂಐ) ‘ತುಂಬ ಕಳಪೆ’ಯಿಂದ ‘ಕಳಪೆ’ ವ್ಯಾಪ್ತಿಯೊಳಗೇ ಇದೆ ಎಂದು Times of India ವರದಿ ಮಾಡಿದೆ.
ಮೋಡ ಬಿತ್ತನೆಯ ನಂತರವೂ ನಗರದಲ್ಲಿ ಇನ್ನೂ ಗಣನೀಯ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮಳೆಯಲ್ಲಿ ಮಾಲಿನ್ಯಕಾರಕಗಳು ಕೊಚ್ಚಿಕೊಂಡು ಹೋದರೂ ಮಾಲಿನ್ಯವು ಮತ್ತೆ ತ್ವರಿತವಾಗಿ ಸೃಷ್ಟಿಯಾಗುತ್ತದೆ. ಪರಿಣಾಮ ಕೆಲವು ಗಂಟೆಗಳಿಂದ ಒಂದೆರಡು ದಿನಗಳವರೆಗೆ ಮಾತ್ರ ಇರುತ್ತದೆ ಎಂದು ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್‌ನ ನಿರ್ದೇಶಕಿ ಅನುಮಿತಾ ರಾಯ್‌ಚೌಧರಿ ಹೇಳಿದರು.
ಈ ಉಪಕ್ರಮವು ದೀರ್ಘಕಾಲಿಕವಲ್ಲ ಎಂದು ಒತ್ತಿ ಹೇಳಿದ ಅವರು,ಇಡೀ ಚಳಿಗಾಲದ ಋತುವಿನಲ್ಲಿ ಇದನ್ನು ನಿಯಮಿತವಾಗಿ ಮಾಡಲು ಸಾಧ್ಯವಿಲ್ಲ. ಇಂತಹ ಹೂಡಿಕೆಗಳು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಸುಸ್ಥಿರ ವಾಯು ಗುಣಮಟ್ಟ ಸುಧಾರಣೆಗಾಗಿ ನೆಲದ ಮೇಲಿನ ಮೂಲಗಳಿಂದ ವಾಸ್ತವಿಕ ಮಾಲಿನ್ಯ ಹೊರಸೂಸುವಿಕೆ ಕಡಿತವನ್ನು ಗುರಿಯಾಗಿಸಿಕೊಳ್ಳಬೇಕಾಗುತ್ತದೆ ಎಂದರು.
ಚಳಿಗಾಲದಲ್ಲಿ ದಿಲ್ಲಿಯ ಹವಾಮಾನವು ಸಾಮಾನ್ಯವಾಗಿ ತುಂಬ ಶುಷ್ಕವಾಗಿದ್ದು, ಗಾಳಿಯಲ್ಲಿ ತೇವಾಂಶ ಬಹಳ ಕಡಿಮೆಯಿರುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಮಳೆಯಾಗುವುದು ವೆಸ್ಟರ್ನ್ ಡಿಸ್ಟರ್ಬನ್ಸ್ (ಮೆಡಿಟರೇನಿಯನ್ ಪ್ರದೇಶದಿಂದ ಉಂಟಾಗುವ ಹವಾಮಾನ ವ್ಯವಸ್ಥೆ) ಬಯಲು ಪ್ರದೇಶಗಳ ಮೇಲೆ ಪ್ರಭಾವ ಬೀರಿದಾಗ ಮಾತ್ರ. ಈ ಮಳೆಯಾದಾಗ ಮೋಡ ಬಿತ್ತನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಮೋಡ ಬಿತ್ತನೆ ಪ್ರಕ್ರಿಯೆಯ ಸಮಯದಲ್ಲಿ ಏಕಕಾಲದಲ್ಲಿ ಭಾರೀ ಮಳೆಯುಂಟಾಗಿ ಜೀವ ಮತ್ತು ಆಸ್ತಿಗೆ ಹಾನಿಯಾದರೆ,ಅದು ಮೋಡ ಬಿತ್ತನೆಗೆ ಸಂಬಂಧಿಸಿರದಿದ್ದರೂ,ಅದರ ಹೊಣೆಯನ್ನು ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದ ಐಐಟಿ ದಿಲ್ಲಿಯ ಸೆಂಟರ್ ಫಾರ್ ಅಟಮಾಸ್ಫರಿಕ್ ಸೈನ್ಸ್‌ನ ಸಹಾಯಕ ಪ್ರೊಫೆಸರ್ ಶಹಝಾದ್ ಗನಿ ಅವರು,ಸ್ಮಾಗ್ ಟವರ್‌ಗಳು,ಸ್ಮಾಗ್ ಗನ್‌ಗಳು ಮತ್ತು ಮೋಡ ಬಿತ್ತನೆಯಂತಹ ಸಿಲ್ವರ್-ಬುಲೆಟ್ ತಂತ್ರಜ್ಞಾನಗಳನ್ನು ನಾವೇಕೆ ಬಳಸುತ್ತಿದ್ದೇವೆ? ವಿವಿಧ ಮೂಲಗಳಿಂದ ಹೊರಸೂಸುವಿಕೆಯನ್ನು ವ್ಯವಸ್ಥಿತವಾಗಿ ಕಡಿಮೆ ಮಾಡುವ ಅಗತ್ಯವಿದೆ ಎಂದು ಹೇಳಿದರು.