ಏರ್ ಇಂಡಿಯಾ ದುರಂತಕ್ಕೆ ಉದ್ದೇಶಪೂರ್ವಕ ಮಾನವ ಹಸ್ತಕ್ಷೇಪ ಕಾರಣ: ಉನ್ನತ ಸುರಕ್ಷಾ ತಜ್ಞ
PC | REUTERS
ಹೊಸದಿಲ್ಲಿ: ಶನಿವಾರ ಬಹಿರಂಗಪಡಿಸಲಾದ ಡ್ರೀಮ್‌ಲೈನರ್ ಏರ್ ಇಂಡಿಯಾ ವಿಮಾನ ದುರಂತದ ತನಿಖಾ ವರದಿಯ ಅಂಶಗಳು ಈ ಅಪಘಾತ ಉದ್ದೇಶಪೂರ್ವ ಮಾನವ ಹಸ್ತಕ್ಷೇಪದಿಂದ ಆಗಿರಬಹುದು ಎಂಬುದನ್ನು ಸಾಬೀತುಪಡಿಸಿದೆ ಎಂದು ವೈಮಾನಿಕ ಸುರಕ್ಷಾ ಸಮಾಲೋಚಕ ಹಾಗೂ ಬೋಯಿಗ್ ವಿಮಾನದ ಮಾಜಿ ತರಬೇತಿ ಕ್ಯಾಪ್ಟನ್ ಮೋಹನ್ ರಂಗನಾಥ್ ಪ್ರತಿಪಾದಿಸಿದ್ದಾರೆ.
ನಾಗರಿಕ ವಾಯು ಯಾನ ಸಚಿವಾಲಯ ಸ್ಥಾಪಿಸಿದ ಸ್ವತಂತ್ರ ತನಿಖಾ ಘಟಕ ವಿಮಾನ ಅಪಘಾತಗಳ ತನಿಖಾ ಬ್ಯೂರೊ (ಎಎಐಬಿ)ದ ಪ್ರಾಥಮಿಕ ವರದಿಯಲ್ಲಿ ಕಾಕ್‌ಪಿಟ್‌ನ ಪೈಲಟ್‌ಗಳಲ್ಲಿ ಓರ್ವ ಎಂಜಿನ್‌ಗೆ ಇಂಧನ ಪೂರೈಕೆ ಕಟ್ ಆಫ್ ಆಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವುದು ಹಾಗೂ ಆ ಬಗ್ಗೆ ಇನ್ನೊಬ್ಬನಲ್ಲಿ ಪ್ರಶ್ನಿಸುತ್ತಿರುವುದು ಬಹಿರಂಗಗೊಂಡಿದೆ.
ಕಾಕ್ ಪಿಟ್ ನ ವಾಯ್ಸ್ ರೆಕಾರ್ಡಿಂಗ್ ನಲ್ಲಿ ಓರ್ವ ಪೈಲಟ್ ಇನ್ನೋರ್ವ ಪೈಲಟ್‌ನಲ್ಲಿ ‘‘ನೀವು ಇಂಧನ ಪೂರೈಕೆಯನ್ನು ಯಾಕೆ ನಿಲ್ಲಿಸಿದಿರಿ ?’’ ಎಂದು ಪ್ರಶ್ನಿಸುತ್ತಿರುವುದು, ಅದಕ್ಕೆ ಇನ್ನೋರ್ವ ಪೈಲಟ್, ‘‘ಇಲ್ಲ ನಾನು ನಿಲ್ಲಿಸಿಲ್ಲ’’ ಎಂದು ಹೇಳುತ್ತಿರುವುದು ದಾಖಲಾಗಿದೆ ಎಂದು ವರದಿ ಪ್ರತಿಪಾದಿಸಿದೆ.
‘‘ಇಂಧನ ಸ್ವಿಚ್ ಸ್ವಯಂಚಾಲಿತವಾಗಿ ಬದಲಾಗುವುದಿಲ್ಲ. ಒಂದು ಸ್ಲಾಟ್ ನಿಂದ ಇನ್ನೊಂದು ಸ್ಲಾಟ್ ಗೆ ಅದನ್ನು ಬದಲಾಯಿಸಬೇಕಾಗುತ್ತದೆ. ಇದನ್ನು ಉದ್ದೇಶಪೂರ್ವಕವಾಗಿ ಮಾತ್ರ ಮಾಡಬಹುದು’’ ಎಂದು ಕ್ಯಾಪ್ಟನ್ ರಂಗನಾಥನ್ ತಿಳಿಸಿದ್ದಾರೆ.