“ಮತಗಳ ಕಳ್ಳರಿಗೆ ದೊಡ್ಡ ಸಂದೇಶ“: ಮತದಾರರ ಪಟ್ಟಿಯಿಂದ ಅಳಿಸಲಾದ ವ್ಯಕ್ತಿಗಳ ಗುರುತು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಕುರಿತು ಪ್ರತಿಕ್ರಿಯಿಸಿದ ಪ್ರತಿಪಕ್ಷಗಳು
ಮಲ್ಲಿಕಾರ್ಜುನ ಖರ್ಗೆ (Photo: PTI)
ಪಾಟ್ನಾ : ಬಿಹಾರದ ಕರಡು ಮತದಾರರ ಪಟ್ಟಿಯಿಂದ ಅಳಿಸಿದ 65 ಲಕ್ಷ ಮತದಾರರ ಜಿಲ್ಲಾವಾರು ಪಟ್ಟಿಯನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು ಮತಗಳ ಕಳ್ಳರಿಗೆ ದೊಡ್ಡ ಸಂದೇಶವಾಗಿದೆ ಎಂದು ವಿರೋಧ ಪಕ್ಷಗಳು ಹೇಳಿವೆ.
ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣಾ ಪ್ರಕ್ರಿಯೆಯ ನಂತರ ಸಿದ್ಧಪಡಿಸಲಾದ ಮತದಾರರ ಪಟ್ಟಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳ ವೆಬ್ಸೈಟ್ ಗಳಲ್ಲಿ ಪ್ರದರ್ಶಿಸಬೇಕೆಂದು ನ್ಯಾಯಾಲಯ ಗುರುವಾರ ನಿರ್ದೇಶಿಸಿದೆ.
ನ್ಯಾಯಾಲಯದ ನಿರ್ದೇಶನಗಳ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟ್ ನಿರ್ದೇಶನವು ಲಕ್ಷಾಂತರ ಜಾಗೃತ ನಾಗರಿಕರ, ಕಾಂಗ್ರೆಸ್ ಪಕ್ಷದ ಮತ್ತು ರಾಹುಲ್ ಗಾಂಧಿಯವರ ಅಭಿಯಾನದ ಮೊದಲ ಯಶಸ್ಸು ಎಂದು ಹೇಳಿದರು.
ಮತದಾನಕ್ಕೆ ಆಧಾರ್ ಕಾರ್ಡ್ ಮಾನ್ಯವಲ್ಲ ಎಂಬ ಚುನಾವಣಾ ಆಯೋಗದ ವಾದವನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
"ನ್ಯಾಯಾಲಯದ ನಿರ್ದೇಶನಗಳು ಆಶಾದಾಯಕವಾಗಿದೆ. ಚುನಾವಣಾ ಪ್ರಕ್ರಿಯೆಯನ್ನು ವಿರೂಪಗೊಳಿಸಲು ಈ ಪ್ರಕ್ರಿಯೆಯನ್ನು ಬಳಸಲು ಪ್ರಯತ್ನಿಸುತ್ತಿರುವ ಮತಗಳ್ಳರಿಗೆ ಇದು ಒಂದು ದೊಡ್ಡ ಸಂದೇಶವಾಗಿದೆ" ಎಂದು ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಹೇಳಿದರು.
ಎಸ್ಐಆರ್ ಕುರಿತು ನ್ಯಾಯಾಲಯದ ನಿರ್ದೇಶನವು, “ಬಿಜೆಪಿಯ ಚುನಾವಣಾ ಆಯೋಗಕ್ಕೆ ಕಪಾಳಮೋಕ್ಷ”ವಾಗಿದೆ ಎಂದು ಆಪ್ ಪಕ್ಷ ಹೇಳಿದೆ.
ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಈ ಕುರಿತು ಪ್ರತಿಕ್ರಿಯಿಸಿ, ವಿಶೇಷ ತೀವ್ರ ಪರಿಷ್ಕರಣೆ ವಿಚಾರದಲ್ಲಿ ವಿರೋಧ ಪಕ್ಷವು ಮುಂದಿಟ್ಟಿದ್ದ ಬೇಡಿಕೆಗಳಿಗೆ ನ್ಯಾಯಾಲಯ ಅನುಮೋದನೆ ನೀಡಿದೆ ಎಂದು ಹೇಳಿದರು.