ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಆಂಧ್ರ ಕರಾವಳಿಗೆ ಚಂಡಮಾರುತದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಸಾಂದರ್ಭಿಕ ಚಿತ್ರ (PTI)
ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತವು ಶನಿವಾರ ತೀವ್ರ ಸ್ವರೂಪದ ಪಡೆದಿದ್ದು, ಸೋಮವಾರ ಆಂಧ‍್ರ ಪ್ರದೇಶದ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಹಾದು ಹೋಗುವುದಕ್ಕೂ ಮುನ್ನ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ ಎಂದು PTI ಸುದ್ದಿ ಸಂಸ್ಥೆ ಹೇಳಿದೆ.
ಚಂಡಮಾರುತದ ಪ್ರಭಾವದಿಂದ ಸೋಮವಾರ ಹಾಗೂ ಮಂಗಳವಾರ ಒಡಿಶಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ವಾಯುಭಾರ ಕುಸಿತವು ವಾಯುವ್ಯ ದಿಕ್ಕಿನೆಡೆಗೆ ಗಂಟೆಗೆ 18 ಕಿಮೀ ವೇಗದಲ್ಲಿ ಹಾದು ಹೋಗುತ್ತಿದ್ದು, ತೀವ್ರ ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ.
ವಾಯುಭಾರ ಕುಸಿತವು ಇಂದು ಮುಂಜಾನೆ 5.30ರ ವೇಳೆಗೆ ಪುದುಚೆರಿಯ ಪೂರ್ವ-ಆಗ್ನೇಯ ದಿಕ್ಕಿನಿಂದ 500 ಕಿಮೀ ದೂರ, ಚೆನ್ನೈನ ಪೂರ್ವ-ಆಗ್ನೇಯ ದಿಕ್ಕಿನಿಂದ 510 ಕಿಮೀ ದೂರ, ನೆಲ್ಲೂರಿನ ಆಗ್ನೇಯ ದಿಕ್ಕಿನಿಂದ 630 ಕಿಮೀ ದೂರ ಹಾಗೂ ಮಚಲಿಪಟ್ಟಣಂನ ದಕ್ಷಿಣ-ಆಗ್ನೇಯ ದಿಕ್ಕಿನಿಂದ 710 ಕಿಮೀ ದೂರದಲ್ಲಿ ಕೇಂದ್ರೀಕೃತಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಳಗ್ಗಿನ ವಾರ್ತಾಪತ್ರದಲ್ಲಿ ಹೇಳಲಾಗಿದೆ.
ಈ ವಾಯುಭಾರ ಕುಸಿತವು ಪಶ್ಚಿಮ-ವಾಯುವ್ಯ ದಿಕ್ಕಿನೆಡೆಗೆ ಹಾದು ಹೋಗುವ ಸಾಧ್ಯತೆ ಇದ್ದು, ಮುಂದಿನ 24 ಗಂಟೆಗಳಲ್ಲಿ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಸ್ವರೂಪ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಈ ನಡುವೆ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಏಳುವ ಸಾಧ್ಯತೆ ಸೃಷ್ಟಿಯಾಗಿರುವುದರಿಂದ ಏಳು ಕರಾವಳಿ ಜಿಲ್ಲೆಗಳಾದ ಬಾಲಸೋರ್, ಭದ್ರಕ್, ಕೇಂದ್ರಾಪುರ, ಜಗತ್ ಸಿಂಗ್ ಪುರ್, ಪುರಿ, ಖುರ್ದಾ ಹಾಗೂ ಗಂಜಮ್ ಗಳಿಗೆ ರಾಜ್ಯ ವಿಶೇಷ ಪರಿಹಾರ ಆಯುಕ್ತರು ಮುನ್ನೆಚ್ಚರಿಕೆ ರವಾನಿಸಿದ್ದಾರೆ.