ದೋಹಾ | ಬಂಧಿತ ಟೆಕ್ ಮಹಿಂದ್ರಾ ಖತರ್ ಮುಖ್ಯಸ್ಥನ ಹೆತ್ತವರಿಂದ ಸರಕಾರದ ಹಸ್ತಕ್ಷೇಪಕ್ಕೆ ಮನವಿ
Photo : indianexpress
ಹೊಸದಿಲ್ಲಿ: ಟೆಕ್ ಮಹಿಂದ್ರಾದ ಕುವೈಟ್ ಮತ್ತು ಖತರ್ ಪ್ರಾದೇಶಿಕ ಮುಖ್ಯಸ್ಥ ಅಮಿತ್ ಗುಪ್ತಾ ಅವರನ್ನು ಜನವರಿಯಲ್ಲಿ ಖತರ್ ನ ಅಧಿಕಾರಿಗಳು ಬಂಧಿಸಿದ್ದಾರೆ. ಅವರ ವಿರುದ್ಧ ಆರೋಪಗಳೇನು ಎನ್ನುವುದನ್ನು ಅಧಿಕಾರಿಗಳು ಈವರೆಗೂ ಬಹಿರಂಗಗೊಳಿಸಿಲ್ಲ. ತನ್ನ ತಾಯಿ ತಯಾರಿಸಿದ ಪನೀರ್ ಪರಾಠಾ ಮತ್ತು ಪೋಷಕರು ಸಂಕಷ್ಟ ಸಮಯದಲ್ಲಿ ‘ಧೈರ್ಯವನ್ನು ಕಂಡುಕೊಳ್ಳಲು ನೆರವಾಗಲು’ ತನಗೆ ನೀಡಿರುವ ಭಗವದ್ಗೀತೆಯ ಇಂಗ್ಲಿಷ್ ಆವೃತ್ತಿ ಅಮಿತ್ ಹೊಂದಿರುವ ಭರವಸೆಗೆ ಆಧಾರವಾಗಿವೆ.
ನ್ಯಾಯಕ್ಕಾಗಿ ಕುಟುಂಬವು ನೋವಿನಲ್ಲಿದ್ದರೂ ಅಮಿತ್ ರ ಪೋಷಕರು ತಮ್ಮ ಮಗನಿಗೆ ನೈತಿಕ ಬೆಂಬಲ ನೀಡಲು ಕಳೆದ ಮೇ ತಿಂಗಳಿನಲ್ಲಿ ಎರಡನೇ ಬಾರಿ ವಡೋದರಾದಿಂದ ದೋಹಾಕ್ಕೆ ತೆರಳಿದವರು ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಟೆಕ್ ಮಹಿಂದ್ರಾ ಅವರು ದೋಹಾಕ್ಕೆ ಪ್ರಯಾಣಿಸಲು ಎಲ್ಲ ಬೆಂಬಲ ಒದಗಿಸಿದ್ದು ಮಾತ್ರವಲ್ಲ, ಅಲ್ಲಿ ಅವರಿಗೆ ಹೋಟೆಲ್ನಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಿದೆ. ತಮಗೆ ತಮ್ಮ ಮಗನ ಅಪಾರ್ಟ್ಮೆಂಟ್ ನಲ್ಲಿಯೇ ವಾಸವಾಗಿರಲು ಅನುಮತಿ ನೀಡುವಂತೆ ಗುಪ್ತಾ ಅವರ ಪೋಷಕರು ಕಂಪನಿಯನ್ನು ಕೋರಿಕೊಂಡಿದ್ದಾರೆ.
ನಿವೃತ್ತ ಒಎನ್ಜಿಸಿ ಉದ್ಯೋಗಿ ಜೆ.ಪಿ.ಗುಪ್ತಾ(73) ಮತ್ತು ಅವರ ಪತ್ನಿ ಪುಷ್ಪಾ(65) ಅವರಿಗೆ ವಾರಕ್ಕೊಮ್ಮೆ ತಮ್ಮ ಮಗನೊಂದಿಗೆ ಮಾತನಾಡಲು ಅವಕಾಶ ನೀಡಲಾಗಿದೆ. ಗುಪ್ತಾ ಜನವರಿಯಿಂದಲೂ ಕಿಟಕಿಗಳಿಲ್ಲದ ಕೋಣೆಯಲ್ಲಿ ಬಂಧನದಲ್ಲಿದ್ದಾರೆ. ಜೈಲಿನಲ್ಲಿರುವ ಯಾರೊಂದಿಗೂ ಮಾತನಾಡದಂತೆ ನಿರ್ಬಂಧಿಸಲಾಗಿದೆ.
‘ನಾವು ಮೊದಲ ಬಾರಿಗೆ ಮಗನನ್ನು ಭೇಟಿಯಾದಾಗ ಆತ ಮಗುವಿನಂತೆ ಅಳುತ್ತಿದ್ದ. ಜ.1ರಂದು ಆತನನ್ನು ಬಂಧಿಸಿದಾಗಿನಿಂದ ಆತನ ವಿರುದ್ಧದ ಆರೋಪಗಳೇನು ಎಂದು ಅಧಿಕಾರಿಗಳು ನಮಗೆ ಈವರೆಗೆ ತಿಳಿಸಿಲ್ಲ. ನಮಗೆ ತಿಳಿದಿರುವಂತೆ ಆತನ ವಿರುದ್ಧ ಯಾವುದೇ ಔಪಚಾರಿಕ ಪ್ರಕರಣವಿಲ್ಲ. ನಮ್ಮ ಮಗ ನೆರವಿಗಾಗಿ ಅಳುತ್ತಾನೆ. ನೆರವಾಗಬಹುದಾದವರೊಂದಿಗೆ ಮಾತನಾಡುವಂತೆ ನಮ್ಮನ್ನು ಕೇಳಿಕೊಳ್ಳುತ್ತಾನೆ. ನಾವು ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಪ್ರಯತ್ನಿಸುತ್ತಿದ್ದೇವೆ ಎಂದು ನಾವು ಆತನಿಗೆ ಭರವಸೆ ನೀಡುತ್ತಿದ್ದೇವೆ. ಆದರೆ ನಮಗೇ ಭರವಸೆಯ ಯಾವುದೇ ಬೆಳಕು ಕಾಣುತ್ತಿಲ್ಲ’ ಎಂದು ಗುಪ್ತಾ ತಿಳಿಸಿದರು.
ಖತರ್ ನಲ್ಲಿಯ ಭಾರತೀಯ ರಾಯಭಾರಿಯನ್ನೂ ಗುಪ್ತಾ ದಂಪತಿಗಳು ಭೇಟಿಯಾಗಿದ್ದಾರೆ. ‘ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದೇವೆ. ಆದರೆ ತಾವಿನ್ನೂ ವರದಿಯನ್ನು ಸಿದ್ಧಪಡಿಸುತ್ತಿರುವುದಾಗಿ ಖತರ್ ನ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ರಾಯಭಾರ ಕಚೇರಿಯು ಅವರಿಗೆ ತಿಳಿಸಿದೆ.
‘ಸಚಿವರ ಮಟ್ಟದಲ್ಲಿ ಹಸ್ತಕ್ಷೇಪವಿಲ್ಲದೆ ನಮ್ಮ ಮನವಿಗಳನ್ನು ಸ್ವೀಕರಿಸಲು ದೋಹಾದ ಅಧಿಕಾರಿಗಳು ನಿರಾಕರಿಸಿರುವಂತೆ ತೋರುತ್ತಿದೆ. ನಾವು ನಮ್ಮ ಮಗನ ಸುರಕ್ಷತೆಗಾಗಿ ಪ್ರಧಾನಿ ಕಚೇರಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಕಚೇರಿಗೆ ಹಲವಾರು ಪತ್ರಗಳನ್ನು ಬರೆದಿದ್ದೇವೆ. ನಮ್ಮ ಪತ್ರಗಳನ್ನು ಪರಿಶೀಲಿಸುವಂತೆ ನಾವು ಅವರನ್ನು ಬೇಡಿಕೊಳ್ಳಬಹುದು, ಅಷ್ಟೇ’ಎಂದು ಗುಪ್ತಾ ಅಳಲು ತೋಡಿಕೊಂಡರು.
ಅಮಿತ್ ಅವರ ಸ್ಥಳೀಯ ವಕೀಲರಿಗೂ ಅವರನ್ನೂ ಭೇಟಿಯಾಗಲು ಇನ್ನೂ ಅವಕಾಶವನ್ನು ನೀಡಿಲ್ಲ ಎಂದರು. ಗುಪ್ತಾ ದಂಪತಿಗೆ ಈವರೆಗೆ ಕೇವಲ ನಾಲ್ಕು ಬಾರಿ ಮಗನನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ. ಅದೂ ಪ್ರತಿ ರವಿವಾರ ಅರ್ಧ ಗಂಟೆ ಮಾತ್ರ.
‘ಭಾರತ ಸರಕಾರವು ಮಧ್ಯಪ್ರವೇಶಿಸಿ ಅಗತ್ಯ ಪ್ರಕ್ರಿಯೆಯನ್ನು ಆರಂಭಿಸಬೇಕು ಎನ್ನುವುದು ನಮ್ಮ ವಿನಂತಿ. ನಾವು ನಮ್ಮ ಮಗನಿಗೆ ಮೂಲಭೂತ ಮಾನವ ಹಕ್ಕುಗಳನ್ನು ಮಾತ್ರ ಬಯಸುತ್ತಿದ್ದೇವೆ. ಭಾರತ ಸರಕಾರವು ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸದಿದ್ದರೆ ಸಾಮಾನ್ಯ ಭಾರತೀಯರು ಎಲ್ಲಿ ಹೋಗಬೇಕು?’ ಎಂದು ಗುಪ್ತಾ ಪ್ರಶ್ನಿಸಿದರು.
ಟೆಕ್ ಮಹಿಂದ್ರಾ ಜೊತೆ ಕೆಲಸ ಮಾಡಲು ಅಮಿತ್ 2013ರಲ್ಲಿ ದೋಹಾಕ್ಕೆ ತೆರಳಿದ್ದರು. ಬಳಿಕ ಅವರು ಖತರ್ ಮತ್ತು ಕುವೈತ್ ಪ್ರಾದೇಶಿಕ ಮುಖ್ಯಸ್ಥರಾಗಿ ಬಡ್ತಿಯನ್ನು ಪಡೆದಿದ್ದು,ದುಬೈನಲ್ಲಿರುವ ತನ್ನ ಮ್ಯಾನೇಜರ್ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.