×
Ad

ಕುನಾಲ್‌ ಕಾಮ್ರಾ ಅವರು ಏಕನಾಥ್‌ ಶಿಂಧೆ ಬಳಿ ಕ್ಷಮೆ ಕೇಳಬೇಕು: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್

Update: 2025-03-24 14:12 IST

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (PTI)

ಮುಂಬೈ: ಕುನಾಲ್‌ ಕಾಮ್ರಾ ಅವರು ಏಕನಾಥ್ ಶಿಂಧೆ ಅವರನ್ನು ವಿಡಂಬಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರತಿಕ್ರಿಯೆ ನೀಡಿದ್ದು, ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಹೇಳಿಕೆಗಳು ಕೆಟ್ಟ ಅಭಿರುಚಿಯಿಂದ ಕೂಡಿವೆ. ಅವರು ಶಿಂಧೆಯ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

"ಕುನಾಲ್‌ ಕಾಮ್ರಾ ಅವರು ರಾಹುಲ್ ಗಾಂಧಿ ಅವರು ಆಗಾಗ್ಗೆ ತೋರಿಸುವ ಅದೇ ಕೆಂಪು ಬಣ್ಣದ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸಿದ್ದಾರೆ. ಆದರೆ, ಇಬ್ಬರೂ ಸಂವಿಧಾನವನ್ನು ಓದಿಲ್ಲ" ಎಂದು ಫಡ್ನವೀಸ್ ಹೇಳಿದರು.

ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ವಿಧಾನ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಸ್ಟ್ಯಾಂಡ್-ಅಪ್ ಕಾಮಿಡಿ ಮಾಡಲು ಸ್ವಾತಂತ್ರ್ಯವಿದೆ, ಆದರೆ ಅವರು ಏನು ಬೇಕಾದರೂ ಮಾತನಾಡಲು ಸಾಧ್ಯವಿಲ್ಲ. ದೇಶದ್ರೋಹಿ ಯಾರು ಎಂದು ಮಹಾರಾಷ್ಟ್ರದ ಜನರು ನಿರ್ಧರಿಸಿದ್ದಾರೆ. ಕುನಾಲ್ ಕಮ್ರಾ ಕ್ಷಮೆಯಾಚಿಸಬೇಕು. ಇದನ್ನು ಸಹಿಸಲಾಗುವುದಿಲ್ಲ. ಹಾಸ್ಯ ಮಾಡುವ ಹಕ್ಕಿದೆ, ಆದರೆ ನಮ್ಮ ಶಿಂಧೆಯ ಮಾನಹಾನಿ ಮಾಡಲು ಅದನ್ನು ಮಾಡುತ್ತಿದ್ದರೆ, ಅದು ಸರಿಯಲ್ಲʼ ಎಂದು ಹೇಳಿದರು.

ಮುಂಬೈನ ಖಾರ್ ಉಪನಗರದಲ್ಲಿರುವ ದಿ ಯುನಿಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ದಿ ಹ್ಯಾಬಿಟ್ಯಾಟ್‌ ಸ್ಟುಡಿಯೋದಲ್ಲಿ ನಡೆದ ಹಾಸ್ಯ ಕಾರ್ಯಕ್ರಮದಲ್ಲಿ, ಕುನಾಲ್ ಕಮ್ರಾ ಶಿಂಧೆಯನ್ನು "ಗದ್ದಾರ್" (ದೇಶದ್ರೋಹಿ) ಗೆ ಹೋಲಿಸಿ ವಿಡಂಬನಾತ್ಮಕ ಪದ್ಯ ಹಾಡಿದ್ದರು.

ಇದು ಶಿವಸೇನೆ ಕಾರ್ಯಕರ್ತರನ್ನು ಕೆರಳಿಸಿದ್ದು, ಕಾರ್ಯಕ್ರಮ ನಡೆದ ಸ್ಟುಡಿಯೋವನ್ನು ಧ್ವಂಸಗೊಳಿಸಿದ್ದರು. ಇದರ ಬೆನ್ನಲ್ಲೇ ಸ್ಟುಡಿಯೋ ಮುಚ್ಚುವುದಾಗಿ ಅದರ ನಿರ್ವಾಹಕರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News