ಡಿಜಿಸಿಎಯಿಂದ ಇಂಡಿಗೋ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಮನ್ಸ್
ಪೀಟರ್ ಎಲ್ಬರ್ಸ್ | Photo Credit : X \ @IndiGo6E
ಹೊಸದಿಲ್ಲಿ, ಡಿ. 10: ಇಂಡಿಗೊ ವಿಮಾನಯಾನ ಸಂಸ್ಥೆಯ ಇತ್ತೀಚಿನ ಕಾರ್ಯಾಚರಣಾ ಕುಸಿತಕ್ಕೆ ವಿವರವಾದ ವಿವರಣೆಯನ್ನು ನೀಡಲು ತನ್ನ ಪ್ರಧಾನ ಕಚೇರಿಗೆ ಗುರುವಾರ ಅಪರಾಹ್ನ 3 ಗಂಟೆಗೆ ಬರುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಇಂಡಿಗೊ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಎಲ್ಬರ್ಸ್‌ರಿಗೆ ಬುಧವಾರ ಸಮನ್ಸ್ ನೀಡಿದೆ.
ವಿಮಾನಯಾನಗಳನ್ನು ಮರುಸ್ಥಾಪಿಸಲು ನಡೆಸಿದ ಪ್ರಯತ್ನಗಳು, ಪೈಲಟ್ ಮತ್ತು ವಿಮಾನ ಸಿಬ್ಬಂದಿಯ ಲಭ್ಯತೆ, ಸಿಬ್ಬಂದಿ ನೇಮಕಾತಿ ಯೋಜನೆಗಳು, ವಿಮಾನ ರದ್ದತಿಗಳು ಹಾಗೂ ಮರುಪಾವತಿಗಳಿಗೆ ಸಂಬಂಧಿಸಿದ ಸಮಗ್ರ ಅಂಕಿಸಂಖ್ಯೆಗಳನ್ನು ಎಲ್ಬರ್ಸ್ ಹಾಗೂ ಪ್ರಮುಖ ವಿಭಾಗೀಯ ಮುಖ್ಯಸ್ಥರು ಡಿಜಿಸಿಎ ಮುಂದಿಡಬೇಕಾಗಿದೆ.
ಇಂಡಿಗೊ ವಿಮಾನ ಯಾನಗಳಲ್ಲಿನ ಭಾರೀ ಪ್ರಮಾಣದ ಅಸ್ತವ್ಯಸ್ತತೆಯ ಹಿನ್ನೆಲೆಯಲ್ಲಿ ಡಿಜಿಸಿಎ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಹಲವು ದಿನಗಳಿಂದ ಇಂಡಿಗೊ ವಿಮಾನಗಳ ಸಾವಿರಾರು ಯಾನಗಳು ರದ್ದುಗೊಂಡಿವೆ, ವಿಳಂಬವಾಗಿವೆ ಅಥವಾ ಮರುನಿಗದಿಯಾಗಿವೆ. ಈ ಹಾಹಾಕಾರದ ಮೂಲ ಕಾರಣವನ್ನು ಪತ್ತೆಹಚ್ಚಲು ಡಿಜಿಸಿಎ ನಾಲ್ವರು ಸದಸ್ಯರ ತನಿಖಾ ಸಮಿತಿಯೊಂದನ್ನು ರಚಿಸಿದೆ.
ಪೈಲಟ್ ಗಳ ವಾರದ ವಿಶ್ರಾಂತಿ ಅವಧಿಯನ್ನು ಡಿಜಿಸಿಎ ಹೆಚ್ಚಿಸಿತ್ತು ಹಾಗೂ ಹೆಚ್ಚುವರಿ ಪೈಲಟ್‌ಗಳ ನೇಮಕಾತಿಗೆ ಸಾಕಷ್ಟು ಸಮಯಾವಕಾಶವನ್ನೂ ನೀಡಲಾಗಿತ್ತು. ಆದರೆ, ಇಂಡಿಗೋ ಪೈಲಟ್ ಗಳ ಸಂಖ್ಯೆಯನ್ನು ಹೆಚ್ಚಿಸದೆ ಲಕ್ಷಾಂತರ ಪ್ರಯಾಣಿಕರ ಮೇಲೆ ಸವಾರಿ ಮಾಡಿದೆ.