×
Ad

ಧರ್ಮಸ್ಥಳ ದೂರು | ಮಾಧ್ಯಮ ವರದಿಗಾರಿಕೆಗೆ ನಿರ್ಬಂಧ ವಿಧಿಸಲು ಸುಪ್ರೀಂ ಕೋರ್ಟ್ ನಕಾರ

ವಿಚಾರಣಾ ನ್ಯಾಯಾಲಯಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲು ನಿರ್ದೇಶನ

Update: 2025-08-08 20:15 IST

ಸುಪ್ರೀಂ ಕೋರ್ಟ್ | PTI 

ಹೊಸದಿಲ್ಲಿ, ಆ. 8: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಪೊಲೀಸರಿಗೆ ಮಾಹಿತಿ ನೀಡದೆ ಹೂಳಲಾಗಿದೆ ಎನ್ನಲಾದ ಪ್ರಕರಣದ ತನಿಖೆಯ ಬಗ್ಗೆ ವರದಿ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಕೋರಿ ಧರ್ಮಸ್ಥಳ ದೇವಸ್ಥಾನದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಈ ಪ್ರಕರಣದ ತನಿಖೆಯನ್ನು ವರದಿ ಮಾಡದಂತೆ ಬೆಂಗಳೂರಿನ ಸಿವಿಲ್ ನ್ಯಾಯಾಲಯವೊಂದು ಇತ್ತೀಚೆಗೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿತ್ತು. ಆದರೆ, ಆ ನಿರ್ಬಂಧವನ್ನು ಬಳಿಕ ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿತ್ತು. ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ನಿರ್ದಿಷ್ಟ ಮಾನನಷ್ಟ ಸಂದೇಶಗಳ ವಿಷಯದಲ್ಲಿ ದೇವಸ್ಥಾನವು ಯಾವತ್ತೂ ಪರಿಹಾರ ಕೋರಬಹುದು ಎಂದು ಹೇಳಿದ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠವು, ಮಾಧ್ಯಮಗಳ ಧ್ವನಿ ಹತ್ತಿಕ್ಕಲು ನಿರಾಕರಿಸಿತು.

‘‘ಅಪರೂಪದಲ್ಲೇ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮಾಧ್ಯಮಗಳ ವರದಿಗಾರಿಕೆಯನ್ನು ನಿರ್ಬಂಧಿಸಿ ಆದೇಶ ನೀಡಲಾಗುತ್ತದೆ. ಉದಾಹರಣೆಗೆ, ಪೊಲೀಸ್ ಅಧಿಕಾರಿಯೋರ್ವನಲ್ಲಿ ಓರ್ವ ಭಯೋತ್ಪಾದಕನ ಫೋನ್ ಸಂಖ್ಯೆ ಇರುವುದು ಓರ್ವ ಪತ್ರಕರ್ತನಿಗೆ ತಿಳಿಯುತ್ತದೆ. ಆಗ ಅವರು ಅದನ್ನು ಪ್ರಕಟಿಸುವಂತಿಲ್ಲ. ಆದರೆ, ಮಾಧ್ಯಮ ನಿರ್ಬಂಧಗಳು ಮಹಾ ತಡೆಯಾಜ್ಞೆಗಳಾಗಿವೆ. ಅವುಗಳು ವಾಕ್ ಸ್ವಾತಂತ್ರ್ಯದ ಉಸಿರುಗಟ್ಟಿಸುತ್ತವೆ. ಈ ಪ್ರಕರಣದಲ್ಲಿ, ಒಬ್ಬ ನೈರ್ಮಲ್ಯ ಕಾರ್ಮಿಕ ಇದ್ದಾರೆ. ಈಗ ಸಾರಾಸಗಟು ಮಾಧ್ಯಮ ನಿರ್ಬಂಧವನ್ನು ಹೊರಡಿಸಿದರೆ, ಅವರ ಹೇಳಿಕೆಯನ್ನೂ ವರದಿ ಮಾಡುವಂತಿಲ್ಲ’’ ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು. ಈ ವಿಷಯವನ್ನು ವಿಚಾರಣಾ ನ್ಯಾಯಾಲಯವೇ ಪರಿಗಣಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅರ್ಜಿದಾರ ಹರ್ಷೇಂದ್ರ ಕುಮಾರ್ ಪರವಾಗಿ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಸುದ್ದಿ ಚಾನೆಲ್ಗಳು ಪ್ರತಿ ದಿನವೂ ಧರ್ಮಸ್ಥಳವನ್ನು ಅವಹೇಳನ ಮಾಡುತ್ತಿವೆ ಎಂದು ಹೇಳಿದರು. ಇಂಟರ್ನೆಟ್ ತುಂಬಾ ಮಾನಹಾನಿಕರ ಮೀಮ್ ಗಳು ಹರಿದಾಡುತ್ತಿವೆ ಎಂದು ಅವರು ಆರೋಪಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಧರ್ಮಸ್ಥಳದ ಸಾಮೂಹಿಕ ಸಮಾಧಿಗಳ ಉತ್ಖನನಕ್ಕೆ ಸಂಬಂಧಿಸಿದ ಮಾನಹಾನಿಕರ ಎನ್ನಲಾದ ವರದಿಗಳನ್ನು ನಿರ್ಬಂಧಿಸುವಂತೆ ಕೋರಿ ಹರ್ಷೇಂದ್ರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೊಸದಾಗಿ ನಡೆಸುವಂತೆ ಕರ್ನಾಟಕದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.

‘‘ನೀವು ಇದೆಲ್ಲವನ್ನೂ ವಿಚಾರಣಾ ನ್ಯಾಯಾಲಯಕ್ಕೆ ತೋರಿಸಿ. ಅವರು ಸ್ವತಂತ್ರವಾಗಿ ತಮ್ಮ ವಿವೇಚನೆಯನ್ನು ಬಳಸಿ ನಿರ್ಧರಿಸಲಿ’’ ಎಂದು ನ್ಯಾ. ಮನಮೋಹನ್ ಹೇಳಿದರು.

ವಿಚಾರಣಾ ನ್ಯಾಯಾಲಯವು ಹೊಸ ಅರ್ಜಿಯನ್ನು ಶನಿವಾರ (ಆಗಸ್ಟ್ 9)ದಿಂದ ಎರಡು ವಾರಗಳ ಅವಧಿಯಲ್ಲಿ ಇತ್ಯರ್ಥಪಡಿಸಬೇಕು ಎಂಬುದಾಗಿಯೂ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

ತನ್ನ ಮೇಲಧಿಕಾರಿಗಳು ಸೂಚಿಸಿದಂತೆ ಸುಮಾರು 20 ವರ್ಷಗಳ ಕಾಲ ತಾನು ನೂರಾರು ಶವಗಳನ್ನು ಪೊಲೀಸರ ಗಮನಕ್ಕೆ ತಾರದೆಯೇ ಹೂತು ಹಾಕಿದ್ದೇನೆ ಹಾಗೂ ಅವುಗಳ ಪೈಕಿ ಅತಿ ಹೆಚ್ಚು ಬಾಲಕಿಯರು ಮತ್ತು ಮಹಿಳೆಯರ ಶವಗಳಾಗಿದ್ದು, ಅವುಗಳಲ್ಲಿ ಅತ್ಯಾಚಾರದ ಕುರುಹುಗಳಿದ್ದವು ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ನೀಡಿರುವ ದೂರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಈ ಪ್ರಕರಣದ ತನಿಖೆಗೆ ಕರ್ನಾಟಕ ಸರಕಾರವು ವಿಶೇಷ ತನಿಖಾ ತಂಡ (ಸಿಟ್)ವೊಂದನ್ನು ರಚಿಸಿದೆ. ತನಿಖಾ ತಂಡವು ಈಗ ಮೃತದೇಹಗಳ ಅವಶೇಷಗಳನ್ನು ಹೊರದೆಗೆಯುವ ಕಾರ್ಯದಲ್ಲಿ ತೊಡಗಿದೆ. ಅದರ ನಡುವೆಯೇ, ಈ ಉತ್ಖನನ ಕಾರ್ಯವನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಸಾರಾಸಗಟು ನಿರ್ಬಂಧ ವಿಧಿಸಬೇಕು ಎಂದು ಕೋರಿ ಹರ್ಷೇಂದ್ರ ನ್ಯಾಯಾಲಯಕ್ಕೆ ಧಾವಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News