ಕರ್ನಲ್ ಸೋಫಿಯಾ ಖುರೇಷಿ, ಭಾರತೀಯ ಸಶಸ್ತ್ರ ಪಡೆಗಳಲ್ಲಿರುವ ಮುಸ್ಲಿಂ ಯೋಧರನ್ನು ಶ್ಲಾಘಿಸಿದ ಶಿಖರ್ ಧವನ್
ಶಿಖರ್ ಧವನ್ | PC : PTI
ಹೊಸದಿಲ್ಲಿ: ಭಾರತೀಯ ಸಶಸ್ತ್ರ ಪಡೆಗಳ ಯೋಧರ ಕುರಿತು ಅದ್ಭುತ ಪೋಸ್ಟ್ ಮಾಡಿರುವ ಮಾಜಿ ಭಾರತೀಯ ಕ್ರಿಕೆಟಿಗ ಶಿಖರ್ ಧವನ್, ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
“ಭಾರತದ ಸ್ಫೂರ್ತಿಯೇ ಒಗ್ಗಟ್ಟು. ಕರ್ನಲ್ ಸೋಫಿಯಾ ಖುರೇಷಿ ಮತ್ತು ಅಸಂಖ್ಯಾತ ಭಾರತೀಯ ಮುಸ್ಲಿಮರು ದೇಶಕ್ಕಾಗಿ ವೀರೋಚಿತವಾಗಿ ಹೋರಾಡಿ, ನಾವೇನನ್ನು ಪ್ರತಿನಿಧಿಸುತ್ತೇವೆ ಎಂಬುದನ್ನು ತೋರಿಸಿದ್ದಕ್ಕೆ ಹ್ಯಾಟ್ಸ್ ಆಫ್”, ಎಂದು ಶಿಖರ್ ಧವನ್ ಪೋಸ್ಟ್ ಮಾಡಿದ್ದಾರೆ.
ಅವರು ಈ ಪೋಸ್ಟ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಒಗ್ಗಟ್ಟಿನ ಕುರಿತು ತಮ್ಮ ನಿಲುವು ಪ್ರದರ್ಶಿಸಿದ್ದಕ್ಕೆ ಶಿಖರ್ ಧವನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಮಧ್ಯಪ್ರದೇಶ ಸಚಿವ ಕುನ್ವಲ್ ವಿಜಯ್ ಶಾ ಅವರು ಭಾರತೀಯ ಸೇನೆಯ ಯೋಧೆ ಕರ್ನಲ್ ಸೋಫಿಯಾ ಖುರೇಷಿ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಶಿಖರ್ ಧವನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಮೇ 7ರಂದು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ದಾಳಿ ನಡೆಸಿದ ನಂತರ, ಕಳೆದ ವಾರ ನಡೆದ ಮಾಧ್ಯಮ ವಿವರಣೆ ಗೋಷ್ಠಿಗಳಲ್ಲಿ ಮತ್ತೊಬ್ಬ ಮಹಿಳಾ ಸೇನಾಧಿಕಾರಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರೊಂದಿಗೆ ಪಾಲ್ಗೊಳ್ಳುವ ಮೂಲಕ ಕರ್ನಲ್ ಸೋಫಿಯಾ ಖುರೇಷಿ ದೇಶವ್ಯಾಪಿ ಮನ್ನಣೆಗೆ ಪಾತ್ರರಾಗಿದ್ದರು.