×
Ad

ಯುವಕರಿಗೆ ಉದ್ಯೋಗಾವಕಾಶಕ್ಕಾಗಿ ವಿವಿಧ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ: ಪ್ರಧಾನಿ ಮೋದಿ

Update: 2026-01-24 21:57 IST

PC: PTI

ಹೊಸದಿಲ್ಲಿ, ಜ. 24: ದೇಶ ಮತ್ತು ವಿದೇಶಗಳಲ್ಲಿ ಇರುವ ಭಾರತೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಕ್ಕಾಗಿ ಭಾರತವು ವಿವಿಧ ದೇಶಗಳೊಂದಿಗೆ ವ್ಯಾಪಾರ ಮತ್ತು ಮುಕ್ತ ಸಂಚಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಅವರು 18ನೇ ರೋಜ್‌ಗಾರ್ ಮೇಳದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ದೇಶಾದ್ಯಂತದ 45 ಸ್ಥಳಗಳಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 61,000ಕ್ಕೂ ಅಧಿಕ ಸರಕಾರಿ ಉದ್ಯೋಗಗಳ ನೇಮಕಾತಿ ಪತ್ರಗಳನ್ನು ಇಲೆಕ್ಟ್ರಾನಿಕ್ ಮಾದರಿಯಲ್ಲಿ ವಿತರಿಸಿದರು.

‘‘ಭಾರತವು ವಿವಿಧ ದೇಶಗಳೊಂದಿಗೆ ವ್ಯಾಪಾರ ಮತ್ತು ಮುಕ್ತ ಸಂಚಾರ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ಈ ವ್ಯಾಪಾರ ಒಪ್ಪಂದಗಳು ದೇಶದ ಯುವಕರಿಗೆ ಹೊಸ ಅವಕಾಶಗಳನ್ನು ತರುತ್ತಿವೆ’’ ಎಂದು ಹೇಳಿದರು.

ಜಗತ್ತಿನಲ್ಲೇ ಅತಿ ಹೆಚ್ಚು ಯುವಕರು ಭಾರತದಲ್ಲಿದ್ದಾರೆ ಎಂದು ಹೇಳಿದ ಮೋದಿ, ದೇಶದೊಳಗೆ ಮತ್ತು ವಿದೇಶಗಳಲ್ಲೂ ಇರುವ ಯುವಕರಿಗೆ ನೂತನ ಅವಕಾಶಗಳನ್ನು ಸೃಷ್ಟಿಸಲು ತನ್ನ ಸರಕಾರವು ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.

ನೇಮಕಾತಿ ಪತ್ರಗಳನ್ನು ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಲು ಸಿಕ್ಕಿದ ಆಹ್ವಾನ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ಕೆಲಸ ಮಾಡುವ ಪ್ರತಿಜ್ಞೆ ಎಂಬುದಾಗಿ ಪರಿಗಣಿಸುವಂತೆ ಈ ಪತ್ರಗಳನ್ನು ಪಡೆದವರನ್ನು ಪ್ರಧಾನಿ ಒತ್ತಾಯಿಸಿದರು.

ಹಿಂದೆ ಸರಕಾರಿ ಕಚೇರಿಗಳಲ್ಲಿ ನೀವು ಅನುಭವಿಸಿದ ಸಮಸ್ಯೆಗಳನ್ನು ಜ್ಞಾಪಿಸಿಕೊಳ್ಳಿ ಹಾಗೂ ನಿಮ್ಮ ಅವಧಿಯಲ್ಲಿ ನಾಗರಿಕರು ಅಂಥ ಸಮಸ್ಯೆಗಳಿಗೆ ಒಳಗಾಗಲು ಬಿಡುವುದಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ಅವರು ಯುವಕರಿಗೆ ಕರೆ ನೀಡಿದರು.

ರೋಜ್‌ಗಾರ್ ಮೇಳಗಳು ಆರಂಭಗೊಂಡಂದಿನಿಂದ ಅವುಗಳ ಮೂಲಕ 11 ಲಕ್ಷಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ದೇಶಾದ್ಯಂತ ವಿತರಿಸಲಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News