ಚುನಾವಣಾ ಆಯೋಗ ಮತಗಳ್ಳತನದ ಪಿತೂರಿಯಲ್ಲಿ ಪ್ರಮುಖ ಪಾಲುದಾರನಾಗಿದೆ: ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ|PC: PTI
ಹೊಸದಿಲ್ಲಿ: ಗುಜರಾತ್ ನಲ್ಲಿ ನಡೆದಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿ ಅತ್ಯಂತ ವ್ಯವಸ್ಥಿತ, ಸಂಘಟಿತ ಹಾಗೂ ವ್ಯೂಹಾತ್ಮಕ ಮತಗಳ್ಳತನ ಮಾಡಲಾಗಿದ್ದು, ಚುನಾವಣಾ ಆಯೋಗವು ಈ ಮತಗಳ್ಳತನದ ಪಿತೂರಿಯಲ್ಲಿ ಪ್ರಮುಖ ಪಾಲುದಾರನಾಗಿದೆ ಎಂದು ಶನಿವಾರ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಸಾಂವಿಧಾನಿಕ ‘ಒಬ್ಬ ವ್ಯಕ್ತಿ, ಒಂದು ಮತ’ ಹಕ್ಕನ್ನು ನಾಶಗೊಳಿಸುವ ಆಯುಧವನ್ನಾಗಿ ಮಾರ್ಪಡಿಸಲಾಗಿದೆ. ಯಾರು ಅಧಿಕಾರದಲ್ಲಿರಬೇಕು ಎಂಬುದನ್ನು ಜನರು ನಿರ್ಧರಿಸುವುದಲ್ಲ, ಬಿಜೆಪಿ ನಿರ್ಧರಿಸುವಂತಾಗಿದೆ” ಎಂದು ದೂರಿದ್ದಾರೆ.
“ಎಲ್ಲೆಲ್ಲ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ನಡೆದಿದೆಯೋ, ಅಲ್ಲೆಲ್ಲ ಮತಗಳ್ಳತನ ನಡೆದಿದೆ. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಗುಜರಾತ್‌ನಲ್ಲಿ ಏನು ನಡೆದಿದೆ ಎಂಬುದು ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ಅದು ಅತ್ಯಂತ ವ್ಯವಸ್ಥಿತ, ಸಂಘಟಿತ ಹಾಗೂ ವ್ಯೂಹಾತ್ಮಕ ಮತಗಳ್ಳತನವಾಗಿದೆ” ಎಂದು ಅವರು ಹೇಳಿದ್ದಾರೆ.
“ಅತ್ಯಂತ ಅಪಾಯಕಾರಿ ಸಂಗತಿಯೆಂದರೆ, ಒಂದೇ ಹೆಸರಿನಲ್ಲಿ ಸಾವಿರಾರು ಬಾರಿ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
“ನಿರ್ದಿಷ್ಟ ಸಮುದಾಯಗಳಿಂದ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಿರುವ ಮತಗಟ್ಟೆಗಳಿಂದ ಆಯ್ಕೆ ಮಾಡಿದಂತೆ ಮತಗಳನ್ನು ತೆಗೆದುಹಾಕಲಾಗಿದೆ. ಎಲ್ಲೆಲ್ಲ ದಯನೀಯವಾಗಿ ಸೋಲುವ ಅಂದಾಜು ಬಿಜೆಪಿಗಿದೆಯೋ, ಅಲ್ಲೆಲ್ಲ ಮತಗಳು ವ್ಯವಸ್ಥೆಯಿಂದ ನಾಪತ್ತೆಯಾಗುವಂತೆ ಮಾಡಲಾಗಿದೆ” ಎಂದು ಅವರು ಆಪಾದಿಸಿದ್ದಾರೆ.
“ಈ ಸ್ವರೂಪ ಅಳಂದದಲ್ಲಿ ಕಂಡುಬಂದಿತ್ತು. ಇದೇ ಸಂಗತಿ ರಜೌರದಲ್ಲೂ ಆಗಿತ್ತು. ಈಗ ಅದೇ ನೀಲಿ ನಕ್ಷೆಯನ್ನು ಗುಜರಾತ್, ರಾಜಸ್ಥಾನ ಹಾಗೂ ಎಲ್ಲೆಲ್ಲ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿದೆಯೋ, ಆ ಎಲ್ಲ ರಾಜ್ಯಗಳಲ್ಲಿ ಹೇರಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
“ಅತ್ಯಂತ ಗಂಭೀರ ಸಂಗತಿಯೆಂದರೆ, ಚುನಾವಣಾ ಆಯೋಗವು ಪ್ರಜಾತಂತ್ರದ ರಕ್ಷಕನಾಗಿ ಉಳಿದಿಲ್ಲ. ಬದಲಿಗೆ ಅದು ಮತಗಳ್ಳತನದ ಪಿತೂರಿಯಲ್ಲಿ ಪ್ರಮುಖ ಪಾಲುದಾರನಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.