ಉತ್ತರ ಪ್ರದೇಶ | ವಾಲಿಬಾಲ್ ಪಂದ್ಯದಲ್ಲಿನ ಜಗಳ ಯುವಕನ ಕೊಲೆಯಲ್ಲಿ ಅಂತ್ಯ!
Credit: iStock Photo
ಲಕ್ನೊ: ವಾಲಿಬಾಲ್ ಪಂದ್ಯದಲ್ಲಿ ಮೋಸ ನಡೆದಿದೆ ಎಂಬ ಆರೋಪವು ಪರಸ್ಪರ ಎದುರಾಳಿ ಗುಂಪುಗಳ ನಡುವೆ ಘರ್ಷಣೆಗೆ ತಿರುಗಿದ ಪರಿಣಾಮ, 20 ವರ್ಷದ ಯುವಕನೊಬ್ಬನನ್ನು ಇರಿದು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಮುಝಾಫ್ಫರ್ ನಗರ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಮುಝಾಫ್ಫರ್ ನಗರ ಜಿಲ್ಲೆಯ ಮೇಘಖೇಡಿ ಗ್ರಾಮದ ನಿವಾಸಿ ಪಾರಸ್ ಕುಮಾರ್ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ನಡೆದ ಪಂದ್ಯದಲ್ಲಿ ಆತ ತಮ್ಮ ಎದುರಾಳಿ ತಂಡದ ಕೆಲವು ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಎಂದು ವರದಿಯಾಗಿದೆ.
ಪಾರಸ್ ಕುಮಾರ್ ಪ್ರತಿನಿಧಿಸುತ್ತಿದ್ದ ತಂಡವು ತಮ್ಮ ಎದುರಾಳಿ ತಂಡ ಹೊಡೆದ ಚೆಂಡು ಗೆರೆಯಿಂದ ಹೊರಗೆ ಬಿದ್ದಿದೆ ಎಂದು ವಾದಕ್ಕಿಳಿದಿದೆ. ಆಗ ಎದುರಾಳಿ ತಂಡವು ವಾಲಿಬಾಲ್ ಗೆರೆಯ ಒಳಗೇ ಬಿದ್ದಿದೆ ಎಂದು ಪ್ರತಿವಾದ ಮಂಡಿಸಿದೆ. ಇದು ತಾರಕಕ್ಕೇರಿ, ದೈಹಿಕ ಸಂಘರ್ಷಕ್ಕೆ ತಿರುಗಿದೆ ಎಂದು ಹೇಳಲಾಗಿದೆ.
ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯರು, ಆಟಗಾರರನ್ನು ಸಮಾಧಾನಪಡಿಸಿದ್ದಾರೆ. ಆ ಹೊತ್ತು ವ್ಯಾಜ್ಯ ಬಗೆಹರಿದಂತೆ ಕಂಡು ಬಂದಿದೆ. ಆದರೆ, ಪಾರಸ್ ಕುಮಾರ್ ಎದುರಾಳಿ ತಂಡದ ಹರ್ಷಿತ್ ಎಂಬ ಯುವಕನು ತನ್ನ ಮತ್ತೊಬ್ಬ ಸ್ನೇಹಿತನೊಂದಿಗೆ ಪಾರಸ್ ಕುಮಾರ್ ನಿವಾಸದ ಬಳಿಗೆ ತೆರಳಿ, ಆತನೊಂದಿಗೆ ಮಾತನಾಡುವ ಸೋಗಿನಲ್ಲಿ ಆತನನ್ನು ಮನೆಯಿಂದ ಹೊರಗೆ ಕರೆದಿದ್ದಾನೆ.
ಪಾರಸ್ ಕುಮಾರ್ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ, ಆತನ ಮೇಲೆ ಹರ್ಷಿತ್ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಪಾರಸ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ದಾಳಿಯ ಬಳಿಕ ಹರ್ಷಿತ್ ಹಾಗೂ ಆತನ ಸ್ನೇಹಿತ ಸ್ಥಳದಿಂದ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪಾರಸ್ ಕುಮಾರ್ ನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಕೆಲವೇ ಕ್ಷಣಗಳ ಅಂತರದಲ್ಲಿ ಆತ ಮೃತಪಟ್ಟಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ತಲೆಮರೆಸಿಕೊಂಡಿರುವ ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.