ಹಿಂದೂ ದೇವತೆಗಳ ವೈವಿಧ್ಯತೆ: ತೆಲಂಗಾಣ ಮುಖ್ಯಮಂತ್ರಿಯ ವಿವಾದಾತ್ಮಕ ಹೇಳಿಕೆಗೆ ಪ್ರತಿಪಕ್ಷಗಳ ಆಕ್ರೋಶ
ರೇವಂತ್ ರೆಡ್ಡಿ | Photo Credit : PTI
ಹೈದರಾಬಾದ್,ಡಿ.3: ಹಿಂದೂ ದೇವತೆಗಳ ಕುರಿತು ತೆಲಂಗಾಣ ಮುಖ್ಯಮಂತ್ರಿ ಇತ್ತೀಚೆಗೆ ವ್ಯಕ್ತಪಡಿಸಿದ ಅನಿಸಿಕೆಗಳು ತೆಲಂಗಾಣದಲ್ಲಿ ಭಾರೀ ರಾಜಕೀಯ ವಿವಾದವಾಗಿ ಪರಿಣಮಿಸಿದೆ. ರೇವಂತ್ ರೆಡ್ಡಿಯವರು ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಅಪಮಾನಿಸುತ್ತಿದ್ದಾರೆಂದು ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಆಪಾದಿಸಿವೆ.
ಹೈದರಾಬಾದ್ ನಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಂದರ್ಭ ರೇವಂತ್ ಅವರು ಹಿಂದೂಧರ್ಮದಲ್ಲಿನ ದೇವತೆಗಳ ವೈವಿಧ್ಯತೆಯನ್ನು ಉಲ್ಲೇಖಿಸಿದ್ದರು.
‘‘ಹಿಂದೂಧರ್ಮದಲ್ಲಿ ಮೂರು ಕೋಟಿ ದೇವತೆಗಳಿದ್ದು, ಅವರನ್ನು ದೈನಂದಿನ ಜೀವನದ ವಿವಿಧ ಅಂಶಗಳೊಂದಿಗೆ ನಂಟು ಕಲ್ಪಿಸಲಾಗುತ್ತಿದೆ. ಅವಿವಾಹಿತರಿಗೆ, ಮರುವಿವಾಹವಾದವರಿಗೆ, ಮದ್ಯಸೇವಿಸುವವರಿಗೆ ಹೀಗೆ ಪ್ರತಿಯೊಬ್ಬರಿಗೂ ಆಯಾಯ ದೇವತೆಗಳಿದ್ದಾರೆ. ಇದರ ಜೊತೆಗೆ ಎಲ್ಲಮ್ಮ, ಪೋಚಮ್ಮ ಹಾಗೂ ಮೈಸಮ್ಮಾ ಅವರಂತಹ ಸ್ಥಳೀಯ ದೇವತೆಗಳೂ ಇದ್ದಾರೆ’’ ಎಂದು ರೇವಂತ್ ಹೇಳಿದ್ದರು. ಅವರ ಭಾಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ವೈರಲ್ ಆಗಿತ್ತು.
ರೇವಂತ್ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಹಿಂದೂ ಧರ್ಮದ ನಂಬಿಕೆಗಳನ್ನು ಆಂಧ್ರ ಮುಖ್ಯಮಂತ್ರಿ ಅಣಕಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದೆ. ಹಿಂದೂಗಳ ವಿರುದ್ಧ ದ್ವೇಷವನ್ನು ಕಾಂಗ್ರೆಸ್ ಪಕ್ಷವು ಪೋಷಿಸುತ್ತಿದೆ ಎಂದು ಕೇಂದ್ರ ಸಚಿವ ತೆಲಂಗಾಣದ ಬಿಜೆಪಿ ಮಾಜಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಸಾಮಾಜಿಕ ಜಾಲತಾಣವೊಂದರಲ್ಲಿ ಆಪಾದಿಸಿದ್ದಾರೆ
ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದ್ದಕ್ಕಾಗಿ ಆಂಧ್ರ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷ ಹಿಂದೂಗಳ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಸರಣಿ ಪ್ರತಿಭಟನೆಗಳನ್ನು ನಡೆಸಲಾಗುವುದೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಜಿ.ರಾಮಚಂದ್ರ ರಾವ್ ಘೋಷಿಸಿದ್ದಾರೆ.
ಇನ್ನೊಂದು ಪ್ರಮುಖ ಪ್ರತಿಪಕ್ಷವಾದ ಬಿಆರ್‌ಎಸ್ ಕೂಡಾ ರೇವಂತ್ ರೆಡ್ಡಿಯವರನ್ನು ಖಂಡಿಸಿದ್ದು, ಈ ವಿವಾದಾತ್ಮಕ ಹೇಳಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಅವರನ್ನು ಆಗ್ರಹಿಸಿದೆ.